ಮೈಸೂರು: ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪ್ರೇರಕವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನಗರ ಹೊರವಲಯದ ಬೋಗಾದಿಯ ಬಾಪೂಜಿ ಬಡಾವಣೆಯಲ್ಲಿ ಶುಕ್ರವಾರ ಜೆಎಸ್‌ಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜಮುಖಿ ಶಿಕ್ಷಣ ನೀತಿಯಿಂದ ಭವಿಷ್ಯದಲ್ಲಿ ಭಾರತ ಪರಮ ಗುರು ಆಗಿ ರೂಪುಗೊಳ್ಳಲಿದ್ದು, ಪರಿಪೂರ್ಣ ದೇಶವಾಗಿಯೂ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವಷ್ಟು ಸ್ವಾವಲಂಬನೆಯಾಗಲಿದೆ. ದೇಶವನ್ನು ಆಳಿದ ಬ್ರಿಟಿಷರು ಗುರುಕುಲ ಶಿಕ್ಷಣ ಪದ್ಧತಿಯನ್ನು ತೆಗೆದು ಹಾಕಿ, ಲಾರ್ಡ್ ಮಕಾಲೆ ಶಿಕ್ಷಣ ನೀತಿ ಜಾರಿಗೊಳಿಸಿದರು. ಇದರಿಂದ ಸ್ವಾತಂತ್ರೃ ಮತ್ತು ಸ್ವಾವಲಂಬನೆ ಜೀವನ ವ್ಯವಸ್ಥೆಯನ್ನು ಹಾಳು ಮಾಡಿದರು. ಭಾರತೀಯರನ್ನು ಪರಾವಲಂಬನೆ ಮಾಡಲು ಏನು ಬೇಕೋ ಅದೆಲ್ಲವನ್ನೂ ಮಾಡಿದರು. ಅವರಿಗೆ ಶಿಕ್ಷಣದಿಂದ ಪರಿವರ್ತನೆ ಬೇಕಿರಲಿಲ್ಲ. ತಮ್ಮ ಆಡಳಿತ ವ್ಯವಸ್ಥೆಗೆ ಕೆಲಸಗಾರರನ್ನು ಸೃಷ್ಟಿಸುವ ಶಿಕ್ಷಣವನ್ನು ಮಾತ್ರ ಉಳಿಸಿಕೊಂಡರು. ಇದನ್ನು ನಿವಾರಣೆ ಮಾಡುವುದು ಸ್ವಾತಂತ್ರೃ ಹೋರಾಟಗಾರರ ಆಶಯವಾಗಿತ್ತು. ಬಳಿಕ ಬಂದ ಸರ್ಕಾರಗಳು ಈ ವಿಷಯದಲ್ಲಿ ನಿಧಾನ ಮಾಡಿದವು ಎಂದು ಅಸಮಾಧಾನ ವ್ಯಕ್ತಪಡಿಸಿದರು.
1968ರಲ್ಲಿ ಇಂದಿರಾಗಾಂಧಿ ಸರ್ಕಾರ ಮತ್ತು 1986ರಲ್ಲಿ ರಾಜೀವ್‌ಗಾಂಧಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಯಿತು. ಆದರೆ, ಅದನ್ನು ಚರ್ಚೆಗೂ ಒಳಪಡಿಸಲಿಲ್ಲ. ಮಕ್ಕಳನ್ನೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಆದರೆ, ಈ ಲೋಪವನ್ನು ನಿವಾರಣೆ ಮಾಡಿರುವ ಈಗಿನ ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿಯನ್ನು ಮಕ್ಕಳ ಕೇಂದ್ರಿತವಾಗಿ ರೂಪಿಸಿದೆ. ಇದು ಸ್ವಾವಲಂಬಿ ಭಾರತ ನಿರ್ಮಾಣಕ್ಕೂ ಪೂರಕವಾಗಿದೆ ಎಂದರು
ಈಗಿನ ವ್ಯವಸ್ಥೆ ಕೆಟ್ಟುಹೋಗಿದೆ. ಸ್ವಾರ್ಥ ಹೆಚ್ಚಾಗಿ, ಅನೈತಿಕತೆ ವಿಜೃಂಭಿಸುತ್ತಿದೆ. ಮನುಷ್ಯ ಮನುಷ್ಯ ನಡುವೆ ನಂಬಿಕೆಯೇ ಇಲ್ಲವಾಗಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ಮಾಡಲು ಸಾಧ್ಯವಾಗದಂತಹ ಸಂಸ್ಕಾರಯುಕ್ತ ಕೆಲಸವನ್ನು ಸುತ್ತೂರು ಮಠ ಶಿಕ್ಷಣದ ಮೂಲಕ ಮಾಡುತ್ತಿದ್ದು, ಮನುಷ್ಯರಿಗೆ ಬೇಕಾದ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಜತೆಗೆ, ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯಲ್ಲೂ ರಾಜ್ಯ ಸರ್ಕಾರಕ್ಕಿಂತ ಒಂದು ಹೆಜ್ಜೆ ಮುಂದಿದೆ ಎಂದರು.
ಶಿಕ್ಷಣವು ಆರ್ಥಿಕ ಮನುಷ್ಯರನ್ನು ಸೃಷ್ಟಿಸುತ್ತಿದೆಯೇ ಹೊರತು, ಸಾಮಾಜಿಕ ಮನುಷ್ಯರನ್ನು ತಯಾರು ಮಾಡುತ್ತಿಲ್ಲ. ವಿದ್ಯಾವಂತರು ಅಮೆರಿಕ, ಇಂಗ್ಲೆಂಡ್‌ನಂತಹ ವಿದೇಶಗಳಿಗೆ ಅಥವಾ ಬೇರೆ ಕಡೆಗೆ ವಲಸೆ ಹೋಗುವ ಮೂಲಕ ಸಾಮಾಜಿಕ ಹೊಣೆಗಾರಿಕೆಯಿಂದ ವಿಮುಕ್ತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬಾಲಕ ಮತ್ತು ಬಾಲಕಿಯರು ಒಟ್ಟಿಗೆ ಕಲಿಯುವ ಸಹ ಶಿಕ್ಷಣ ಪದ್ಧತಿಗೆ (ಕೋ ಎಜುಕೇಷನ್) ಈಗಲೂ ಪಾಲಕರು ಹೆದರುತ್ತಾರೆ. ಇಂತಹ ಶಾಲಾ-ಕಾಲೇಜುಗಳಿಗೆ ಹೆಣ್ಣು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ ಬಾಲಕಿಯರಿಗಾಗಿ ಹೊಸ ಕಾಲೇಜು ಕಟ್ಟಿದ್ದು, ನಗರದ ಹೃದಾಯಭಾಗಕ್ಕೆ ಸೀಮಿತವಾಗದೆ, ನಗರ ಹೊರವಲಯದ ವಿದ್ಯಾರ್ಥಿಗಳಿಗೂ ಅನುಕೂಲ ಕಲ್ಪಿಸಿಕೊಟ್ಟಿದೆ. ಹೊಸ ಕಾಲೇಜಿನಲ್ಲಿ ಸುಸಜ್ಜಿತ ಪ್ರಯೋಗಾಲಯ, ಆಧುನಿಕ ತಂತ್ರಜ್ಞಾನ ಪರಿಕರಗಳು ಲಭ್ಯವಿವೆ. ಗುಣಮಟ್ಟದ ಶಿಕ್ಷಣವನ್ನು ಜೆಎಸ್‌ಎಸ್ ಸಂಸ್ಥೆ ನೀಡುವ ಮೂಲಕ ಮಾದರಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದೆ ಎಂದರು.
ವಿಧಾನಪರಿಷತ್‌ನ ಮಾಜಿ ಸದಸ್ಯ ಅರುಣ್ ಶಹಾಪುರ ಮಾತನಾಡಿ, ಮಂಗಳೂರು ಭಾಗದಲ್ಲಿ ವಸತಿ ಕಾಲೇಜುಗಳು ಹೆಚ್ಚಿವೆ. ಇದೇ ರೀತಿಯಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಇಲ್ಲಿಯೂ ಪದವಿಪೂರ್ವ ವಸತಿ ಕಾಲೇಜುಗಳನ್ನು ಪ್ರಾರಂಭಿಸಿ ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಣದ ಪ್ರಸಾರ ದೊಡ್ಡ ಸವಾಲಾಗಿರುವ ಸಂದರ್ಭದಲ್ಲಿ ಗುಣಮಟ್ಟದ ಶಿಕ್ಷಣವನ್ನು ಜೆಎಸ್‌ಎಸ್ ಸಂಸ್ಥೆ ದೇಶದಲ್ಲಷ್ಟೇ ಅಲ್ಲದೆ ಸಾಗರದಾಚೆಗೂ ನೀಡುತ್ತಿದೆ. ಉತ್ತರ ಕರ್ನಾಟಕದಲ್ಲಿ ಕೆಎಲ್‌ಇ, ಡಿಎಲ್‌ಡಿ, ವಿದ್ಯಾವರ್ಧಕ ಸಂಘ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆಗಳು ಶಿಕ್ಷಣ ವಂಚಿತರಿಗೆ ಶಿಕ್ಷಣ ನೀಡಿವೆ. ಅಂತೆಯೆ, ಮೈಸೂರು ಭಾಗದಲ್ಲಿ ಜೆಎಸ್‌ಎಸ್ ಸಂಸ್ಥೆ ಜ್ಞಾನ ದಾಸೋಹದ ಮೂಲಕ ಈ ಭಾಗದ ಭಾಗ್ಯದ ಬಾಗಿಲನ್ನೇ ತೆರೆಸಿದೆ ಎಂದರು.
ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಹಳ್ಳಿಯಿಂದ ಅಂತಾರಾಷ್ಟ್ರೀಯ ಮಟ್ಟದವರೆಗೆ ಶಿಕ್ಷಣವನ್ನು ಎಲ್ಲರಿಗೂ ಜೆಎಸ್‌ಎಸ್ ಸಂಸ್ಥೆ ನೀಡುತ್ತಿದೆ. ಪೂರ್ವ ಪ್ರಾಥಮಿಕ ಶಾಲೆಯಿಂದ ಹಿಡಿದು ವೈದ್ಯಕೀಯ, ತಾಂತ್ರಿಕ ಕಾಲೇಜು ಮತ್ತು ವಿಶ್ವವಿದ್ಯಾಲಯದ ವರೆಗೆ ಇದು ಬೆಳೆದಿದೆ. ಈ ಮೂಲಕ ಶೈಕ್ಷಣಿಕ ಪ್ರಗತಿಗೆ ನೆರವಾಗಿದೆ ಎಂದರು.
ಚಾಮುಂಡೇಶ್ವರಿ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಹೊಸ ಕೊಠಡಿ ಮತ್ತು ಮೂಲಸೌಲಭ್ಯ ಕಲ್ಪಿಸಿಕೊಡಲು ಅನುದಾನ ಬಿಡುಗಡೆ ಮಾಡಬೇಕು ಎಂದು ತಂದೆ ಶಾಸಕ ಜಿ.ಟಿ.ದೇವೇಗೌಡ ಪರವಾಗಿ ಸಚಿವರಿಗೆ ಮನವಿ ಮಾಡಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ವೀಣಾ ನಾಗೇಶ್ ಇದ್ದರು.
ಜ್ಞಾನಕ್ಕೆ ಜಗತ್ತಿನೆಲ್ಲೆಡೆ ಗೌರವವಿದೆ. ಜ್ಞಾನ ಸಂಪಾದಿಸಿಕೊಂಡರೆ ಎಲ್ಲಾದರೂ ಬದುಕಬಹುದು. ಅದೊಂದು ರತ್ನ. ಸದಾ ಅದರ ಹೊಳಪು. ಇಂತಹ ಜ್ಞಾನದೊಂದಿಗೆ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿಕೊಂಡರೆ ಬದುಕಿನ ವಿಕಾಸಕ್ಕೆ ಹಾದಿಯಾಗುತ್ತದೆ.ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ