ತಿ.ನರಸೀಪುರ: ತಾಲೂಕಿನ ಗರ್ಗೇಶ್ವರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನವಾಗಿ ವೈದ್ಯಾಧಿಕಾರಿಯಾಗಿ ನಿಯೋಜನೆಗೊಂಡಿರುವ ಡಾ.ಎಸ್.ಸುಹಾಸ್ ಅವರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸ್ವಾಗತ ಕೋರಿ ಸನ್ಮಾನಿಸಲಾಯಿತು.
ಗರ್ಗೇಶ್ವರಿ ಗ್ರಾಮದ ಪ್ರಾಥಮಿಕ ಆರೋಗ್ಯ ಸೇವಾ ಕೇಂದ್ರದಲ್ಲಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸರಳ ಸಮಾರಂಭದಲ್ಲಿ ಟ್ರಸ್ಟ್ ಅಧ್ಯಕ್ಷ ಯಡದೊರೆ ಮಹೇಶ್ ನಾಯಕ್ ನೆನಪಿನ ಕಾಣಿಕೆ ನೀಡಿ ಬರಮಾಡಿಕೊಂಡರು.
ಜೆಡಿಎಸ್ ರಾಜ್ಯ ವಕ್ತಾರ ತಾಯೂರು ಪ್ರಕಾಶ್ ಮಾತನಾಡಿ, ಈ ಹಿಂದೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಪ್ರಭುಸ್ವಾಮಿ ಅವರು ತಮ್ಮ ಸೇವಾವಧಿಯಲ್ಲಿ ಉತ್ತಮ ಕೆಲಸ ಮಾಡಿ ಸಾರ್ವಜನಿಕರ ಪ್ರಶಂಶೆಗೆ ಒಳಗಾಗಿದ್ದರು. ಅವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ನಂಜನಗೂಡು ತಾಲೂಕು ಕಸುವಿನಹಳ್ಳಿ ಗ್ರಾಮದಲ್ಲಿ ಹಾಗೂ ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿ ಅನುಭವವಿರುವ ಡಾ.ಎಸ್.ಸುಹಾಸ್ ನಿಯೋಜನೆಗೊಂಡಿದ್ದಾರೆ.
ನೂತನ ವೈದ್ಯರು ಈ ಭಾಗದ ಜನತೆಗೆ ಉತ್ತಮ ಆರೋಗ್ಯ ಸೇವೆ ಸಲ್ಲಿಸಿ ಜನತೆಯ ಪ್ರಶಂಸೆಗೆ ಪಾತ್ರವಾಗುವ ಮೂಲಕ ಮತ್ತಷ್ಟು ಉನ್ನತ ಹುದ್ದೆಗೇರಲಿ ಎಂದು ಹಾರೈಸಿದರು.
ನೂತನ ವೈದ್ಯಾಧಿಕಾರಿ ಡಾ.ಸುಹಾಸ್ ಮಾತನಾಡಿ, ನಾನು ಈವರೆಗೆ ಸೇವೆ ಸಲ್ಲಿಸಿರುವ ಗ್ರಾಮಗಳಲ್ಲಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ್ದೇನೆ.ರೋಗಿಗಳ ಸೇವೆ ನನ್ನ ಮುಖ್ಯ ಧ್ಯೇಯವಾಗಿದ್ದು ಇಲ್ಲಿಯೂ ಸಹ ಉತ್ತಮವಾದ ಆರೋಗ್ಯ ಸೇವೆ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ರೋಗಿಗಳು ಯಾವುದೇ ಸಮಸ್ಯೆಗಳಿದ್ದರೂ ನನ್ನನ್ನು ನೇರವಾಗಿ ಸಂಪರ್ಕ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
ಶ್ರೀ ಮಹರ್ಷಿ ವಾಲ್ಮೀಕಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಯಡದೊರೆ ಮಹೇಶ್‌ನಾಯಕ್, ಪೂರಿಗಾಲಿ ಗ್ರಾ.ಪಂ. ಅಧ್ಯಕ್ಷ ಚಿಕ್ಕ ಬಸವರಾಜು, ಸದಸ್ಯ ಜಗದೀಶ್ ನಾಯಕ್, ಟ್ರಸ್ಟ್‌ನ ಪದಾಧಿಕಾರಿಗಳಾದ ರವೀಶ್, ಮಂಜು, ವೆಂಕಟರಾಜು, ದೇವರಾಜು,ನಾಗಣ್ಣ, ಮಹದೇವ, ರವಿ, ಮುರುಳಿ, ತುಂಬಲ ಸುರೇಶ್, ಆಸ್ಪತ್ರೆಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ದಿನೇಶ್ ಕುಮಾರ್, ಪ್ರಯೋಗಶಾಲೆ ತಂತ್ರಜ್ಞೆ ನಸೀಮ ಅಖ್ತರ್, ಸಿಎಚ್‌ಓ ರೂಪಶ್ರೀ, ಸಿಬ್ಬಂದಿ ದೇವರಾಜು, ಮಂಜುನಾಥ್ ಇತರರಿದ್ದರು.