ಜಿಲ್ಲೆ

ನೂತನ ವೃತ್ತಕ್ಕೆ ದೇವರ ದಾಸಿಮಯ್ಯ ಹೆಸರು ನಾಮಕರಣ ಮಾಡಿದ ಶಾಸಕ ಪ್ರೀತಂಗೌಡ

reportermys

ಹಾಸನ : ಇಡೀ ಕರ್ನಾಟಕದಲ್ಲಿ ಇಲ್ಲಿಯವರೆಗೂ ಯಾವುದೇ ವೃತ್ತಕ್ಕೆ ದೇವರದಾಸಿಮಯ್ಯವರ ಹೆಸರನ್ನು ಇಟ್ಟು ಪ್ರತಿಷ್ಠಾನ ಮಾಡಿರುವ ಉದಾಹರಣೆ ಇಲ್ಲ. ಸಮಾಜದ ಬಂಧುಗಳ ಸಹಕಾರದಲ್ಲಿ ಪ್ರತಿಷ್ಠಾಪಿಸಿರುವ ಈ ವೃತ್ತ ಹಾಸನದ ಮುಖ್ಯ ವೃತ್ತ ಆಗಲಿದೆ ಎಂದು ಶಾಸಕ ಪ್ರೀತಂ ಗೌಡ ಅವರು ಹೇಳಿದರು.
ನಗರದ ಆರ್.ಸಿ. ರಸ್ತೆ ವೆಸ್ಲಿ ಚರ್ಚ್ ಬಳಿ ಇರುವ ನೂತನ ವೃತ್ತಕ್ಕೆ ಭಾನುವಾರ ದೇವರ ದಾಸಿಮಯ್ಯ ಎಂದು ನಾಮಕರಣ ಮಾಡಿ ಮಾತನಾಡಿದ ಶಾಸಕರು, ಮನುಷ್ಯನಾದ ನಾವು ಇಂತಹ ಜಾತಿಯಲ್ಲೇ ಹುಟ್ಟಬೇಕೆಂದು ಅರ್ಜಿ ಹಾಕಿರುವುದಿಲ್ಲ. ದೈವಾನುಗ್ರಹ ಸಮಾಜದಲ್ಲಿ ನಾವು ಜನಿಸಿದ್ದೇವೆ. ಒಂದು ಸಮಾಜದ ಕಷ್ಟ-ಸುಖಗಳಿಗೆ ನೆರವಾಗುವುದು ಮನುಷ್ಯ ಧರ್ಮ ಎಂದರು.
ನಾನು ಶಾಸಕನಾಗಿ ಒಂದು ಸಮಾಜಕ್ಕೆ ಇಲ್ಲವೇ ಒಬ್ಬರಿಗೆ ಸೀಮಿತವಾಗಿ ಕೆಲಸ ಮಾಡದೆ ಹಿಂದುಳಿದ ವರ್ಗಗಳ ಒಕ್ಕೂಟ ಕೇಳಿದ ಕೆಲಸ ಮಾಡಿಸಿಕೊಟ್ಟಿದ್ದೇನೆ. ಕುರುಹಿನ ಶೆಟ್ಟಿ, ದೇವಾಂಗ, ಈಡಿಗ, ಕುಂಬಾರ ಸಮುದಾಯ ಸೇರಿದಂತೆ ಎಲ್ಲಾ ಸಮಾಜ 9 ಸಾವಿರ ಅಡಿ ಜಾಗ ಕೇಳಿದಾಗ ಅರಸೀಕೆರೆ ರಸ್ತೆ, ಕೃಷ್ಣ ನಗರದಲ್ಲಿ ನಿವೇಶನ ಕೊಡುವುದರ ಮೂಲಕ ಎಲ್ಲ ಸಮಾಜಗಳ ಏಳಿಗೆಗೆ ಶ್ರಮಿಸಿದ್ದೇನೆ ಎಂದು ಹೇಳಿದರು.
ದೇವಾಂಗ ಸಂಘದ ಅಧ್ಯಕ್ಷರಾದ ನಂಜುಂಡಸ್ವಾಮಿ ಮಾತನಾಡಿ, ಶಾಸಕರ ಆದೇಶ ಪಡೆದು ಕೇವಲ ಎರಡು ದಿನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೃತ್ತದಲ್ಲಿ ದೇವರ ದಾಸಿಮಯ್ಯ ಅವರ ಪ್ರತಿಮೆ ಸ್ಥಾಪನೆ ಮಾಡಬೇಕೆಂದು ಶಾಸಕರಿಗೆ ಮನವಿ ಮಾಡಿದ್ದೆವು. ನಮ್ಮ ಜನಾಂಗದಲ್ಲಿ ಯಾವ ರಾಜಕಾರಣಿ ಇಲ್ಲ. ಎಲ್ಲಾ ನೀವೇ ಆಗಿದ್ದೀರಿ ಎಂದರು.
ನೂತನ ವೃತ್ತ ಉದ್ಘಾಟನೆಗೂ ಮೊದಲು ನಗರದ ಪ್ರಮುಖ ರಸ್ತೆಗಳಲ್ಲಿ ಸಮುದಾಯದವ ನೂರಾರು ಮಂದಿ ಮೆರವಣಿಗೆ ಮಾಡಿದರು.
ಈ ಸಂದರ್ಭದಲ್ಲಿ ನೇಕಾರ ದೇವರ ದಾಸಿಮಯ್ಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಎನ್. ಮನೋಹರ್, ಬಿಜೆಪಿ ಮುಖಂಡರಾದ ಪುನೀತ್, ಮೋಹನ್, ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಶೆಟ್ರು. ಬನಶಂಕರಿ ದೇವಾಂಗ ಸಂಘದ ಅಧ್ಯಕ್ಷ ಆನಂದ್, ದೇವಾಂಗ ಮಂಡಳಿ ಸಂಘದ ಅಧ್ಯಕ್ಷ ಜ್ಞಾನೇಶ್ವರ್, ಪಟ್ಟಸಾಲಿ ಸಂಘದ ಅಧ್ಯಕ್ಷ ಲಕ್ಷ್ಮಣ್, ನಾಗವೇಣಿ, ಪ್ರೇಮಮ್ಮ ಇತರರು ಉಪಸ್ಥಿತರಿದ್ದರು.