ಜಿಲ್ಲೆ

ನೂತನ ಮಾರುಕಟ್ಟೆಯಿಂದ ರೈತರಿಗೆ ಅನುಕೂಲ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ್ ಅಭಿಮತ, ನೆಲಮಂಗಲದಲ್ಲಿ ಶೀಘ್ರ ಉಪಮಾರುಕಟ್ಟೆ

ದೇವನಹಳ್ಳಿ: ಉತ್ಪನ್ನಗಳನ್ನು ಮಾರಾಟ ಮಾಡಲು ದಲ್ಲಾಳಿಗಳನ್ನು ಅವಲಂಬಿಸದೆ ರೈತರು, ನೆರವಾಗಿ ಲಾಭ ಬರುವ ಬೆಲೆಗೆ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಅನುಕೂಲವಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ವಿಶ್ವನಾಥ್ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ದೊಡ್ಡಬಳ್ಳಾಪುರ ಎಪಿಎಂಸಿಯಿಂದ 48 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮುಚ್ಚು ಮಾರುಕಟ್ಟೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಎಲ್ಲರ ಸಹಕಾರದಿಂದ 48 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿ, ಅದರ ನಿರ್ವಹಣೆ ಆದಾಯ, ವೆಚ್ಚದ ಜವಾಬ್ದಾರಿ ಪುರಸಭೆಗೆ ವರ್ಗಾಯಿಸಲಾಗಿದೆ ಎಂದರು.

ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ 100 ಕೋಟಿ ವಹಿವಾಟು ಇರುವ ನಮ್ಮ ಸಮಿತಿ ಸಹ ನಷ್ಟ ಅನುಭವಿಸುವಂತಾಗಿದೆ. ಹಾಗಾಗಿ ಸರ್ಕಾರ ಈ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಮನವಿ ಮಾಡಿದರು. ನೆಲಮಂಗಲದಲ್ಲಿ 6.10 ಎಕರೆ ವಿಸ್ತೀರ್ಣದಲ್ಲಿ ಉಪ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಎಲ್ಲರ ಒಗ್ಗಟ್ಟಿನ ಪರಿಶ್ರಮದಿಂದ ರೈತರಿಗೆ ಕೊಡುಗೆಯಾಗಿ ಈ ಎಪಿಎಂಸಿ ಮಾರಾಟ ಮಳಿಗೆ ಲೋಕಾರ್ಪಣೆಗೊಂಡಿದೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ವಿ ಮಂಜುನಾಥ್ ಮಾತನಾಡಿ, ಪುರಸಭೆ ಹಾಗೂ ಶಾಸಕರು ಹಾಗೂ ಸದಸ್ಯರ ಸಹಕಾರದಿಂದ ಜಾಗ ಗುರುತಿಸಿ, ಅಂದಿನ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಅವರಿಂದ 50 ಲಕ್ಷ ರೂ. ಅನುದಾನ ತಂದು ಈ ಮಾರುಕಟ್ಟೆ ನಿರ್ಮಿಸಲಾಯಿತು ಎಂದರು.

ರೈತರ ಕೃಷಿ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ವಾಪಾಸ್ ಪಡೆದಿದ್ದರೂ ರಾಜ್ಯ ಸರ್ಕಾರ ಹಿಂಪಡೆದಿಲ್ಲ. ಈ ಬಗ್ಗೆ ಸದಸನದಲ್ಲಿ ಪ್ರಸ್ತಾಪ ಮಾಡಬೇಕು ಎಂದರು.

ಉದ್ಘಾಟನಾ ಫಲಕದಲ್ಲಿ ವಾರ್ಡ್ ಸದಸ್ಯ ವೈ.ಆರ್. ರುದ್ರೇಶ್ ಹೆಸರು ಹಾಕದ್ದಕ್ಕೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಸಿ.ಜಗನ್ನಾಥ್, ಉಪಾಧ್ಯಕ್ಷೆ ಪುಷ್ಪಲತಾ ಲಕ್ಷ್ಮೀನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಪ್ಪ, ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷೆ ಅಮರಾವತಿ, ಮಾಜಿ ಉಪಾಧ್ಯಕ್ಷ ಸುಧಾಕರ್ ಇತರರು ಇದ್ದರು.