ಮೈಸೂರು: ನ್ಯಾಯಾಂಗ ಸೇವೆಗೆ ಸೇರಿದಾಗ ಮೈಸೂರಿನ ವಕೀಲರಿಂದಲೇ ಬಹಳಷ್ಟು ಕಲಿತಿರುವೆ ಎಂದು ನೂತನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಎಸ್. ಸಂಗ್ರೇಶಿ ಹೇಳಿದರು.
ನಗರದ ಕೋರ್ಟ್ ಆವರಣದಲ್ಲಿರುವ ವಕೀಲರ ಸಭಾಂಗಣದಲ್ಲಿ ಗುರುವಾರ ವಕೀಲರ ಸಂಘದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ವಕೀಲರಿಂದ ಈ ಸ್ಥಾನ ಅಲಂಕರಿಸಲು ಸಾಧ್ಯವಾಯಿತು. ಮತ್ತೆ ಈಗ ಪ್ರಧಾನ ನ್ಯಾಯಾಧೀಶನಾಗಿ ಬಂದಿದ್ದೇನೆ. ನಾನು ಈ ರೀತಿಯ ಸ್ವಾಗತ ಸಿಗುತ್ತದೆಂದು ನಿರೀಕ್ಷೆ ಮಾಡಿರಲಿಲ್ಲ. ನನಗೆ ಅದ್ದೂರಿಯಾಗಿ ಸ್ವಾಗತ ಕೋರಿದ್ದೀರಿ ಎಂದು ಸಂತಸ ವ್ಯಕ್ತಪಡಿಸಿದರು.
ಮೈಸೂರು ನ್ಯಾಯಾಲಯ ಹೊಸದೇನಲ್ಲ. ಮೊದಲು ಇಲ್ಲಿ ಕಾನೂನು ಸೇವೆ ಸಲ್ಲಿಸಿದ್ದೆ. 2009ರಲ್ಲಿ ಸಿವಿಲ್ ವಿಭಾಗದ ನ್ಯಾಯಾಧೀಶನಾಗಿ ಕಾರ್ಯನಿರ್ವಹಿಸಿರುವೆ. ಅಂದು ಬಹಳ ಕಡಿಮೆ ವಕೀಲರಿದ್ದರು. ಈಗ ಈ ವಕೀಲರ ಸಂಘದಲ್ಲಿ ಸುಮಾರು 6 ಸಾವಿರ ವಕೀಲರಿದ್ದಾರೆ ಎಂದು ತಿಳಿಸಿದರು.
ಏನೇ ಸಮಸ್ಯೆಗಳು ಇದ್ದರೂ ಅವುಗಳನ್ನು ಒಂದೊಂದಾಗಿ ಬಗೆಹರಿಸುವ ಪ್ರಯತ್ನ ಮಾಡೋಣ. ಎಲ್ಲರೂ ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿ, ಬದುಕಬೇಕು. ಹಣ ಅಂತಸ್ತು ಮುಖ್ಯ ಅಲ್ಲ ಎಂದರು.
ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ, ಕಾರ್ಯದರ್ಶಿ ಉಮೇಶ್ ಇತರರು ಇದ್ದರು.