ಜಿಲ್ಲೆ

ನೂತನ ದೇವರಾಜ ಪೊಲೀಸ್ ಠಾಣೆ ಉದ್ಘಾಟನೆ

ಮೈಸೂರು: ನಗರದ ದೇವರಾಜ ಪೊಲೀಸ್ ಠಾಣೆ ಹಾಗೂ ದೇವರಾಜ ಸಂಚಾರ ಪೊಲೀಸ್ ಠಾಣೆಯ ನೂತನ ಕಟ್ಟಡ ಗುರುವಾರ ಲೋಕಾರ್ಪ ಣೆಗೊಂಡಿತು.

ಧನ್ವಂತ್ರಿ ರಸ್ತೆಯ ಕೆ.ಆರ್. ಆಸ್ಪತ್ರೆಯ ಕಟ್ಟಡಕ್ಕೆ ಹೊಂದಿಕೊಂಡಂತೆ ಇದ್ದ ದೇವರಾಜ ಪೊಲೀಸ್ ಠಾಣೆಯ ಕಟ್ಟಡ ಸಂಪೂರ್ಣ ದುಸ್ಥಿತಿಯಲ್ಲಿ ಇತ್ತು. ಪೊಲೀಸರು ಜೀವ ಭಯದಲ್ಲಿ ಕಾರ್ಯನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ದೇವರಾಜ ಸಂಚಾರ ಪೊಲೀಸ್ ಠಾಣೆಯು ಲಷ್ಕರ್ ಪೊಲೀಸ್ ಠಾಣೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತಿತ್ತು. ಇದೀಗ ಈ ಎರಡು ಠಾಣೆಗಳು ಕೃಷ್ಣವಿಲಾಸ ರಸ್ತೆಯ ಅಂಬೇಡ್ಕರ್ ಭವನದ ಬಳಿ ಇರುವ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿವೆ.

ಪೊಲೀಸ್ ಠಾಣೆಯನ್ನು ಉದ್ಘಾಟಿಸಿದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ರಾಜ್ಯ ಸರ್ಕಾರ ರಾಜ್ಯದಲ್ಲಿ 110 ಪೊಲೀಸ್ ಠಾಣೆಗಳ ನಿರ್ವಾಣಕ್ಕೆ ಅನುದಾನ ನೀಡಿದೆ. ಈ ಪೈಕಿ ನಗರದಲ್ಲಿ ನಾಲ್ಕು ಠಾಣೆಗಳು ನಿರ್ವಾಣವಾಗಿದೆ. ಇನ್ನೆರಡು ಠಾಣೆಗಳ ನಿರ್ವಾಣಕ್ಕೆ ಶೀಘ್ರ ದಲ್ಲೇ ಅನುದಾನ ಬಿಡುಗಡೆ ವಾಡಿಸಲಾಗುವುದು ಎಂದು ಭರವಸೆ ನೀಡಿದರು.

ಈ ಹಿಂದೆ ಪೊಲೀಸರು ಎಂದರೆ ಜನರು ಭಯ ಪಡುತ್ತಿದ್ದರು. ಆದರೆ ಇದೀಗ ಪೊಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ದಿನದ 24 ಗಂಟೆ ಜನರ ರಕ್ಷಣೆಗೋಸ್ಕರ ಪೊಲೀಸರು ದುಡಿಯುತ್ತಿದ್ದಾರೆ. ಜನರ ರಕ್ಷಣೆಗೋಸ್ಕರ ದುಡಿಯುತ್ತಿರುವ ಪೊಲೀಸರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಪೊಲೀಸರಿಗೆ ಸೂಕ್ತ ಸೌಲಭ್ಯಗಳು ದೊರೆತರೆ ಮಾತ್ರ ಅವರು ದಕ್ಷತೆಯಿ ಂದ ಕಾರ್ಯನಿರ್ವಹಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತದೆ. ಪೊಲೀಸರು ಸರ್ಕಾರ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕುವ ಕಾರ್ಯ ಮಾಡಬೇಕು ಎಂದರು.

ಮೇಯರ್ ಶಿವಕುಮಾರ್ ಮಾತನಾಡಿ, ಸಮಾಜದಲ್ಲಿ ಶಾಂತಿ ನೆಲೆನಿಲ್ಲುವಂತೆ ಮಾಡುವಲ್ಲಿ ಪೊಲೀಸರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಪರಸ್ಪರ ಉತ್ತಮ ಸಂಬಂಧ ಇರಬೇಕು. ಹೀಗಾಗಿ ಪೊಲೀಸರು ನಗರದ ಹಿರಿಯರೊಂದಿಗೆ ಚರ್ಚೆ ನಡೆಸಿ ನಗರದ ಹಾಗುಹೋಗು ಗಳನ್ನು ತಿಳಿದುಕೊಳ್ಳಬೇಕು. ಇದರಿಂದ ನಗರದ ಸಂಪೂರ್ಣ ಮಾಹಿತಿ ಪೊಲೀಸರಿಗೆ ದೊರೆಯುತ್ತದೆ ಎಂದು ಸಲಹೆ ನೀಡಿದರು.

ಪೊಲೀಸರು ಇರುವುದು ನಮ್ಮ ರಕ್ಷಣೆಗೋಸ್ಕರ ಎಂಬ ಭಾವನೆ ಸಾರ್ವಜನಿಕರಲ್ಲಿ ಬರಬೇಕು. ಸಾರ್ವಜನಿಕರಿಂದ ದಂಡ ವಸೂಲಿ ವಾಡುವುದು ಮಾತ್ರ ಪೊಲೀಸರ ಕರ್ತವ್ಯವಲ್ಲ. ಪೊಲೀಸರು ಜನರಲ್ಲಿ ಕಾನೂನು ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಅದೇ ರೀತಿ ಸಾರ್ವಜನಿಕರು ಸಾರ್ವಜನಿಕರು ಕಾನೂನು ಉಲ್ಲಂಘನೆ ವಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ಮಾತನಾಡಿ, ನಗರದಲ್ಲಿ ಅಪರಾಧ ಚಟುವಟಿಕೆಗಳ ನಿಯಂತ್ರಿಸಲು ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಯಾವುದೇ ಸಮಸ್ಯೆಗಳು ಇದ್ದಲ್ಲಿ ಸಾರ್ವಜನಿಕರು ನೇರವಾಗಿ ಠಾಣೆಗೆ ಆಗಮಿಸಿ ಸಮಸ್ಯೆ ಪರಿಹರಿಸಿಕೊಳ್ಳಬಹುದು. ಪೊಲೀಸ್ ಠಾಣೆಗಳು ಇರುವುದು ಸಾರ್ವಜನಿಕರ ಸೇವೆಗೆ ಎಂಬ ಭಾವನೆ ಜನರಲ್ಲಿ ಮೂಡಬೇಕು. ಈ ರೀತಿಯ ಭಾವನೆ ಇದ್ದರೆ ಪೊಲೀಸರಿಗೆ ಕೆಲಸ ಮಾಡಲು ಅನುಕೂಲವಾಗಲಿದೆ ಎಂದರು.

ದೇವರಾಜ ಪೊಲೀಸ್ ಠಾಣೆ ಹಾಗೂ ದೇವರಾಜ ಸಂಚಾರ ಪೊಲೀಸ್ ಠಾಣೆಗೆ ಸೂಕ್ತ ಕಟ್ಟಡಗಳು ಇರಲಿಲ್ಲ. ಇನ್ನು ಮುಂದೆ ನೂತನ ಸುಸಜ್ಜಿತ ಕಟ್ಟಡದಲ್ಲಿ ಈ ಎರಡು ಠಾಣೆಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು. ವೇದಿಕೆಯಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮೈಲ್ಯಾಕ್ ಅಧ್ಯಕ್ಷ ಆರ್.ರಘು, ನಗರಪಾಲಿಕೆ ಸದಸ್ಯರಾದ ಎಂ.ಸತೀಶ್, ಪ್ರಮೀಳಾ ಭರತ್, ಡಿಸಿಪಿಗಳಾದ ಎಂ.ಮುತ್ತುರಾಜ್, ಎಸ್. ಜಾಹ್ನವಿ, ಶಿವರಾಜು, ಕೆ. ಮಾರುತಿ, ಎಸಿಪಿಗಳಾದ ಶಾಂತಮಲ್ಲಪ್ಪ, ಪರಶುರಾಮಪ್ಪ, ಜಿ.ಎಸ್. ಗಜೇಂದ್ರ ಪ್ರಸಾದ್, ಬಿ.ಶಿವಕುಮಾರ್, ಕೆ.ಎನ್. ಸುರೇಶ್, ಕೆ.ಅಮರನಾರಾಯಣ, ಎಸ್.ಇ. ಗಂಗಾಧರಸ್ವಾಮಿ ಹಾಗೂ ಇತರರು ಇದ್ದರು.