ಜಿಲ್ಲೆ

ನೂತನ ಕೃಷಿ ಕಾಯ್ದೆ ವಿರುದ್ಧ ರೈತರ ಆಕ್ರೋಶ

ಗದಗ: ಕೇಂದ್ರ ಸರ್ಕಾರ ಜಾರಿಗೊಳಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಶನಿವಾರ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ನಡೆಸಿದರು.

ಗದಗ-ಬೆಟಗೇರಿ, ನರಗುಂದ ಮತ್ತು ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸೇತುವೆ ಬಳಿ ಪ್ರತಿಭಟನೆ ನಡೆಸಿದ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನೂತನ ಕಾಯ್ದೆಗಳು ರೈತರ ಪಾಲಿಗೆ ಮರಣ ಶಾಸನದಂತಿದ್ದು, ಇದರಿಂದ ಅನ್ನದಾತನಿಗೆ ಏನೂ ಉಪಯೋಗವಿಲ್ಲ. ಕಾಯ್ದೆ ವಿರೋಧಿಸಿ ನವದೆಹಲಿಯಲ್ಲಿ ಕಳೆದ ಒಂದೂವರೆ ತಿಂಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಪ್ರಧಾನಮಂತ್ರಿ ಕ್ಯಾರೆ ಎನ್ನುತ್ತಿಲ್ಲ. ಕಾಪೋರೇಟ್ ಕಂಪನಿಗಳ ಕೈಗೊಂಬೆಯಂತೆ ವರ್ತಿಸುತ್ತಿರುವ ರೈತ ವಿರೋಧಿ ಸರ್ಕಾರ ತೊಲಗಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಗದಗ ನಗರದಲ್ಲಿ ರೈತ ಸಂಘ ಮತ್ತು ಹಸಿರುಸೇನೆ ವತಿಯಿಂದ ಸ್ಥಳೀಯ ಕಿತ್ತೂರು ಚನ್ನಮ್ಮ ವೃತ್ತದಿಂದ ಪಾದಯಾತ್ರೆ ಮೂಲಕ ಟಿಪು್ಪ ವೃತ್ತ ತಲುಪಿ ಅಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಅಲ್ಲಿಂದ ಜಿಲ್ಲಾಡಳಿತ ಭವನದ ಮುಂದೆ ಕೆಲ ಹೊತ್ತು ಹೆದ್ದಾರಿ ತಡೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಕೆ.ಜಿ. ಶಾಂತಸ್ವಾಮಿಮಠ, ಮಲಕಾಜಗೌಡ ಶಂಕರಗೌಡ, ಮುತ್ತನಗೌಡ ಚೌಡರೆಡ್ಡಿ, ಮಹದೇವಗೌಡ ಪಾಟೀಲ, ಹನುಮಂತ ಗೊಜನೂರ, ಮಹೇಶ ಪತ್ತಾರ, ಮಹೇಶ ಹಿರೇಮಠ, ಹಡಪದ ವಕೀಲರು ಮತ್ತಿತರರು ಇದ್ದರು.

ಮಾತಿನ ಚಕಮಕಿ: ಜಿಲ್ಲಾಧಿಕಾರಿ ಸುಂದರೇಶಬಾಬು ಅವರನ್ನು ಭೇಟಿ ಮಾಡುವ ವಿಷಯ ರೈತರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹೆದ್ದಾರಿ ತಡೆ ಪ್ರತಿಭಟನೆ ನಂತರ ರೈತರು ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಬೇಕು. ಹೀಗಾಗಿ ಜಿಲ್ಲಾಡಳಿತ ಭವನದೊಳಗೆ ತೆರಳಲು ಅವಕಾಶ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದರು. ಆದರೆ, ಪೊಲೀಸರು ಇದಕ್ಕೆ ನಿರಾಕರಿಸಿದ್ದರಿಂದ ರೈತ ಮುಖಂಡರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಜಿಲ್ಲಾಧಿಕಾರಿ ಪ್ರತಿಭಟನೆ ಸ್ಥಳಕ್ಕೆ ಆಗಮಿಸುತ್ತಾರೆ ಎಂದು ಪೊಲೀಸರು ರೈತರನ್ನು ಸಮಾಧಾನಪಡಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ರೈತರು ಪೊಲೀಸರ ವರ್ತನೆ ಖಂಡಿಸಿ ಗೇಟ್ ಬಳಿಯೇ ಪ್ರತಿಭಟನೆ ನಡೆಸಿದರು. ತದನಂತರ ರೈತರನ್ನು ಸಮಾಧಾನಪಡಿಸಿ ಜಿಲ್ಲಾಧಿಕಾರಿ ಭೇಟಿಗೆ ಅವಕಾಶ ಕಲ್ಪಿಸಲಾಯಿತು.

ಆಂಬುಲೆನ್ಸ್​ಗೆ ದಾರಿ: ಗದಗ-ಹುಬ್ಬಳ್ಳಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿರುವ ಸಂದರ್ಭದಲ್ಲಿ ಆಗಮಿಸಿದ ಆಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟು ರೈತರು ಮಾನವೀಯತೆ ಮೆರೆದರು. ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.