ಜಿಲ್ಲೆ

ನೂತನ ಎಸ್ಪಿ ಉಮಾ ಪ್ರಶಾಂತ್ ಅಧಿಕಾರ ಸ್ವೀಕಾರ

ಚಿಕ್ಕಮಗಳೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಉಮಾ ಪ್ರಶಾಂತ್ ಸೋಮವಾರ ನಿರ್ಗಮಿತ ಎಸ್ಪಿ ಎಂ.ಎಚ್.ಅಕ್ಷಯ್ ಅವರಿಂದ ಅಧಿಕಾರ ಸ್ವೀಕರಿಸಿದರು.

ಭಾನುವಾರ ರಾತ್ರಿ ನಗರಕ್ಕೆ ಆಗಮಿಸಿದ್ದ ಉಮಾ ಪ್ರಶಾಂತ್ ಬೆಳಗ್ಗೆ ನಗರದ ಶ್ರೀ ಬೋಳರಾಮೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಎಸ್ಪಿ ಕಚೇರಿಗೆ ಆಗಮಿಸಿದ ಅವರನ್ನು ಡಿಎಆರ್ ಇನ್ಸ್​ಪೆಕ್ಟರ್ ಸಹದೇವ್ ಮತ್ತು ಸಿಬ್ಬಂದಿ ಗಾರ್ಡ್ ಆಫ್ ಹಾನರ್ ಮೂಲಕ ಸ್ವಾಗತಿಸಿದರು.

ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಉಮಾ ಪ್ರಶಾಂತ್, ಈವರೆಗೂ ಎಸ್ಪಿ ಎಂ.ಎಚ್.ಅಕ್ಷಯ್ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅವರು ಮಾಡಿದ ಒಳ್ಳೆ ಕೆಲಸಗಳನ್ನು ಜಿಲ್ಲೆಯ ಜನರ ಸಹಕಾರದಿಂದ ಮುಂದುವರಿಸುತ್ತೇನೆ. ಯಾವುದೇ ಸಮಸ್ಯೆ ಎದುರಾದರೂ ಅಧಿಕಾರಿ, ಸಿಬ್ಬಂದಿ ಒಗ್ಗೂಡಿ ಸಮರ್ಥವಾಗಿ ಎದುರಿಸುವ ವಿಶ್ವಾಸವಿದೆ. ಎಲ್ಲ ಇಲಾಖೆಯೊಂದಿಗೆ ಸಮನ್ವಯದಿಂದ ಸಾಗುತ್ತೇವೆ ಎಂದು ಭರವಸೆ ನೀಡಿದರು.

ಪ್ರತಿಯೊಂದು ವಿಷಯವನ್ನು ಕಾನೂನು ಚೌಕಟ್ಟಿನಲ್ಲಿ ಬಗೆಹರಿಸುವ, ಸಾಮಾಜಿಕ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇನೆ. ಕುಣಿಗಲ್, ಕಾರವಾರ, ಮಂಗಳೂರು ಮತ್ತು ಎಸಿಬಿಯಲ್ಲಿ ಸೇವೆ ಮಾಡಿ ಬಂದಿದ್ದೇನೆ. ಈ ಜಿಲ್ಲೆ ಪ್ರವಾಸೋದ್ಯಮ ಕೇಂದ್ರ, ಪ್ರಾಕೃತಿಕ, ನೈಸರ್ಗಿಕವಾಗಿ ಹೆಸರು ವಾಸಿಯಾಗಿದೆ. ಜಿಲ್ಲೆಯ ಜನ ಸ್ವಭಾವತಃ ಉತ್ತಮರಾಗಿದ್ದಾರೆಂಬ ಮಾಹಿತಿ ಇದೆ. ಅವರ ಸಹಕಾರದಿಂದ ಜನಪರ ಕೆಲಸ ಮಾಡುವ ಗುರಿ ಇದೆ ಎಂದರು.