ಹಾಸನ: ಹಾಸನದ ನೂತನ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಎಂ.ವಿ. ಆಶಿಶ್ ರೆಡ್ಡಿ ಅವರು ಮಂಗಳವಾರ ಅಧಿಕಾರ ಸ್ವೀಕಾರ ಮಾಡಿದರು.
ಸೋಮವಾರ ಡಿಎಫ್‌ಒ ಕೆ. ಹರೀಶ್ ಅವರನ್ನು ಕರ್ತವ್ಯ ಲೋಪದ ಮೇಲೆ ಸರ್ಕಾರ ಅಮಾನತ್ತು ಮಾಡಿದ ಹಿನ್ನೆಲೆಯಲ್ಲಿ ಚಿಕ್ಕಮಂಗಳೂರಿನಲ್ಲಿ ಕಾರ್ಯ ಯೋಜನೆ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆಶಿಶ್ ರೆಡ್ಡಿ ಅವರನ್ನು ಹೆಚ್ಚುವರಿ ಆಗಿ ಹಾಸನದ ಡಿಎಫ್‌ಒ ಆಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಮಂಗಳವಾರ ಬೆಳಗ್ಗೆ ನಗರದ ಅರಣ್ಯ ಭವನಕ್ಕೆ ಆಗಮಿಸಿದ ಅವರು ಅಧಿಕಾರ ಸ್ವೀಕರಿಸಿ, ಅಧಿಕಾರಿಗಳಿಂದ ಜಿಲ್ಲೆಯ ಮಾಹಿತಿಯನ್ನು ಪಡೆದುಕೊಂಡು
2016ನೇ ಬ್ಯಾಚಿನ ಐಎಫ್‌ಎಸ್ ಅಧಿಕಾರಿಯಾಗಿರುವ ಇವರು ಮೊದಲ ಬಾರಿಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಎಸಿಎಫ್ ಆಗಿ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರ ಕುಂದಾಪುರದಲ್ಲಿ ಡಿಎಫ್‌ಒ ಆಗಿ 2 ವರ್ಷ 9 ತಿಂಗಳು ಸೇವೆ ಸಲ್ಲಿಸಿ, ಕಳೆದ 4 ತಿಂಗಳಷ್ಟೇ ಚಿಕ್ಕಮಗಳೂರಿಗೆ ಕಾರ್ಯ ಯೋಜನೆ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನಿಯೋಜನೆಗೊಂಡಿದ್ದರು.
ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಶಿಶ್ ರೆಡ್ಡಿ, ಇಲಾಖೆ ಅಧಿಕಾರಿಗಳು ನನಗೆ ಹಾಸನವನ್ನು ಹೆಚ್ಚುವರಿಯಾಗಿ ಹುದ್ದೆ ನೀಡಿ ಆದೇಶ ನೀಡಿದ್ದಾರೆ. ಅದರಂತೆ ಮಂಗಳವಾರ ಅಧಿಕಾರ ಸ್ವೀಕರಿಸಿದ್ದೇನೆ. ವಿಸ್ತೀರ್ಣದಲ್ಲಿ ಜಿಲ್ಲೆ ತುಂಬಾ ದೊಡ್ಡದಾಗಿರುವುದರಿಂದ ಹಾಗೂ ಆಡಳಿತದ ದೃಷ್ಟಿಯಿಂದ ನನ್ನನ್ನ ನೇಮಕ ಮಾಡಿದ್ದಾರೆ. ಎಲ್ಲರ ಸಹಕಾರದಿಂದ ಉತ್ತಮ ಕೆಲಸ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.