ನಾಗಮಂಗಲ: ಜಿಲ್ಲಾ ಕೇಂದ್ರದಲ್ಲಿ ನುಲಿಯ ಚಂದಯ್ಯ ಸಮುದಾಯ ಭವನ ನಿರ್ಮಿಸಲು ನಗರಸಭೆ ಅಥವಾ ಮುಡಾ ವ್ಯಾಪ್ತಿಯಲ್ಲಿ ಸೂಕ್ತ ನಿವೇಶನ ಕೊಡಿಸಲು ಅಗತ್ಯ ಕ್ರಮ ವಹಿಸಲಾಗುವುದೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕು ಆಡಳಿತದ ಸಹಭಾಗಿತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ನಾಡಿನ ಜನರಿಗೆ ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಮಾಜವನ್ನು ಒಟ್ಟಿಗೆ ಕೊಂಡೊಯ್ಯುವ ಸಿದ್ಧಾಂತದೊಂದಿಗೆ ಬಸವಣ್ಣ ಅವರ ತತ್ವದಂತೆ ಹೋರಾಟ ನಡೆಸುವ ಸಂದೇಶ ಕೊಟ್ಟ ನುಲಿಯ ಚಂದಯ್ಯ ಅವರೊಬ್ಬ ಮಹಾನ್ ಶರಣರು. ಇಂತಹ ಮಹಾನ್ ವ್ಯಕ್ತಿಯ ಜಯಂತಿ ಆಚರಿಸುವ ಮೂಲಕ ಸ್ಮರಿಸದಿದ್ದರೆ ಅವರ ಹೆಸರನ್ನೇ ಮರೆತುಹೋಗುತ್ತೇವೆ. ತಳ ಸಮುದಾಯಕ್ಕೆ ಹೆಚ್ಚು ಶಕ್ತಿ ತುಂಬುವ ಸಲುವಾಗಿ ಸರ್ಕಾರ ಪ್ರತಿಯೊಬ್ಬ ಮಹನೀಯರ ಜಯಂತಿಯನ್ನು ಆಚರಣೆಗೆ ತಂದಿದೆ ಎಂದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿರುವ ವಸತಿ ಮತ್ತು ನಿವೇಶನ ರಹಿತ ಅಲೆಮಾರಿ ಸಮುದಾಯದ ಅಂಕಿ ಅಂಶದೊಂದಿಗೆ ಆಯಾ ತಾಲೂಕಿನ ತಹಸೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿದರೆ ಸೂಕ್ತ ಜಾಗವನ್ನು ಗುರುತಿಸಿ ನಿವೇಶನ ಕೊಡಿಸಬಹುದು ಎಂದರು.
ದೇವನೂರು ಕ್ಷೇತ್ರದ ಮಾಜಿ ಶಾಸಕ ಜಿ.ಚಂದ್ರಣ್ಣ ಮಾತನಾಡಿ, ಅಲೆಮಾರಿ ಜನಾಂಗ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಜತೆಗೆ ಸಂವಿಧಾನದತ್ತವಾದ ಕಾರ್ಯಕ್ರಮಗಳನ್ನು ಅನುಗುಣವಾಗಿ ಪಡೆಯಬೇಕು. ಕೊರಮ, ಕೊರಚ ಎಂದು ಜಾತಿ ಹೆಸರು ಹೇಳಿಕೊಳ್ಳುವುದು ಅಪಮಾನವಲ್ಲ. ಸಮುದಾಯ ಸಂಘಟಿತರಾಗಿ ಹೋರಾಟದ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಎಲ್ಲರೊಟ್ಟಿಗೆ ಬೆರೆತು ನಾಯಕತ್ವದ ಗುಣ ಬೆಳೆಸಿಕೊಂಡು ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳಾಗುವ ಅವಕಾಶ ಪಡೆದುಕೊಳ್ಳುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಎಸ್ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಮಾತನಾಡಿ, ಅಲೆಮಾರಿ ಅಭಿವೃದ್ಧಿ ನಿಗಮ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕನಸಿನ ಕೂಸಾಗಿತ್ತು. ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ಅವಕಾಶ ವಂಚಿತ ಸಮುದಾಯವನ್ನು ಗುರುತಿಸಿ ಎಸ್ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪಿಸಿ 120 ಕೋಟಿ ರೂ. ಅನುದಾನ ನೀಡಿದ್ದರು. ಅಲೆಮಾರಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕಾಂಗ್ರೆಸ್ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ. ನಿಗಮದ ಅಧ್ಯಕ್ಷೆಯಾದ ನಂತರ ಇಡೀ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಅಲೆಮಾರಿ ಸಮುದಾಯದ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ರಾಜ್ಯ ಕುಳುವ ಮಹಾ ಸಂಘದ ಜಂಟಿ ಕಾರ್ಯದರ್ಶಿ ಕಿರಣ್‌ಕುಮಾರ್ ಕೊತ್ತಗೆರೆ ವಿಶೇಷ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮುದಾಯದ ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ನುಲಿಯ ಚಂದಯ್ಯ ಅವರ ಭಾವವಿತ್ರವನ್ನು ಬೆಳ್ಳಿ ಮಾದರಿಯ ಸಾರೋಟಿನಲ್ಲಿರಿಸಿ ಪೂರ್ಣಕುಂಭ ಸ್ವಾಗತ ಹಾಗೂ ವಿವಿಧ ಜಾನಪದ ಕಲಾತಂಡಗಳೊಂದಿಗೆ ತಾಲೂಕು ಆಡಳಿತ ಸೌಧದಿಂದ ಶಿಕ್ಷಕರ ಭವನದವರೆಗೆ ಮೆರವಣಿಗೆ ನಡೆಸಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಬಿ.ಎಸ್.ಸತೀಶ್, ಬಿಇಒ ಲೋಕೇಶ್, ಅರಣ್ಯಾಧಿಕಾರಿ ಸಂಪತ್‌ಪಟೇಲ್, ಮುಖಂಡರಾದ ತಿರುಮಲಾಪುರ ಗೋಪಾಲ್, ರಾಮಶೆಟ್ಟಿ, ನಾಗಮ್ಮ, ಸಿದ್ದಾರ್ಥ ಕೃಷ್ಣ, ಆನಂದಕುಮಾರ್, ಮುದ್ದನಘಟ್ಟ ಮಹಾಲಿಂಗೇಗೌಡ, ನರಸಿಂಹ ಮತ್ತಿತರರಿದ್ದರು.