ಜಿಲ್ಲೆ

ನುಲಿಯ ಚಂದಯ್ಯ ತತ್ವ ಅಳವಡಿಸಿಕೊಂಡರೆ ಬದುಕು ಸಾರ್ಥಕ : ತಹಸೀಲ್ದಾರ್ ಗುರುಪ್ರಸಾದ್ ಅಭಿಪ್ರಾಯ

ಚಾಮರಾಜನಗರ : 12ನೇ ಶತಮಾನದಲ್ಲೇ ಕಾಯಕದ ಮಹತ್ವವನ್ನು ಸಾರಿದ ಶಿವಶರಣ ನುಲಿಯ ಚಂದಯ್ಯ ಅವರ ತತ್ವಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕತೆ ಎನಿಸುತ್ತದೆ ಎಂದು ತಹಸೀಲ್ದಾರ್ ಗುರುಪ್ರಸಾದ್ ಅಭಿಪ್ರಾಯಪಟ್ಟರು.

ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಸಭಾಂಗಣದಲ್ಲಿ ಗುರುವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ನುಲಿಯ ಚಂದಯ್ಯ ಅವರ 916ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.


ಬಸವಣ್ಣನ ಸಮಕಾಲೀನ ನುಲಿಯ ಚಂದಯ್ಯ ಅವರು ಕಾಯಕದ ಮೂಲಕವೇ ಉನ್ನತಿ ಕಂಡವರು. ಹಗ್ಗ ನೇಯುವ ಕಾಯಕದಿಂದ ಬಂದ ಹಣದಿಂದ ದಾಸೋಹ ನಡೆಸಿದ ಶಿವಶರಣ.

ಬಸವ ಕಲ್ಯಾಣಕ್ಕೆ ಆಗಮಿಸಿದ ಇವರು ಕಾಯಕ ತತ್ವವನ್ನು ಜನಮಾನಸದಲ್ಲಿ ಬಿತ್ತುವುದರ ಮೂಲಕ ದುಡಿಯುವ ವರ್ಗಕ್ಕೆ ಅನುವು ಮಾಡಿಕೊಟ್ಟವರು. ಇವರ ಕಾಯಕ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಬಸವಣ್ಣನವರಿಗೆ ಪ್ರಿಯರಾಗಿದ್ದರು.

ಇವರು ರಚಿಸಿರುವ 48 ವಚನಗಳು ಕಾಯಕದ ಶ್ರೇಷ್ಠತೆಯನ್ನು ಸಾರುತ್ತದೆ. ಆದ್ದರಿಂದ ಇವರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಪ್ರಗತಿ ಹೊಂದಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.


ತುಳುವ ಸಮಾಜದ ಜಿಲ್ಲಾಧ್ಯಕ್ಷ ಮಾದೇಶ್ ಮಾತನಾಡಿ, ಲಿಂಗಪೂಜೆಗಿಂತ ಕಾಯಕದ ಪೂಜೆಗೆ ಮಹತ್ವ ನೀಡಿದ ನುಲಿಯ ಚಂದಯ್ಯ ಅವರು ವಚನಗಳನ್ನು ರಚಿಸುವುದರ ಮೂಲಕ ಕೊಡುಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಜಯಂತಿಯನ್ನು ಸರ್ಕಾರದ ವತಿಯಿಂದ ಅಚರಿಸಲಾಗುತ್ತಿದ್ದು, ಕಳೆದ ವರ್ಷ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

ಈ ವರ್ಷ ಸಮುದಾಯದ ಮುಖಂಡರ ಅಪೇಕ್ಷೆಯಂತೆ ಸೆ.3ರಂದು ಜಿಲ್ಲಾಡಳಿತದ ವತಿಯಿಂದ ಹನೂರಿನಲ್ಲೇ ವಿಜೃಂಭಣೆಯಿಂದ ಜಯಂತಿ ಆಚರಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗವಹಿಸಬೇಕು. ಮುಂದಿನ ವರ್ಷದಿಂದ ಇವರ ಜಯಂತಿಯನ್ನು ಶಾಲಾ, ಕಾಲೇಜುಗಳಲ್ಲೂ ಆಚರಿಸುವಂತಾಗಬೇಕು ಎಂದು ಹೇಳಿದರು.


ಈ ಸಂದರ್ಭದಲ್ಲಿ ಶಿರಸ್ತೇದಾರ್ ನಾಗೇಂದ್ರ, ಆರ್‌ಐ ಮಹದೇವಸ್ವಾಮಿ, ಗ್ರಾಮ ಆಡಳಿತ ಅಧಿಕಾರಿಗಳಾದ ಶೇಷಣ್ಣ, ಕಾರ್ತಿಕ್, ತುಳುವ ಸಮಾಜದ ಜಿಲ್ಲಾ ಕಾರ್ಯದರ್ಶಿ ಮುನಿಯಪ್ಪ, ಸಹ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ರಾಜೇಂದ್ರ, ಮಾಜಿ ಅಧ್ಯಕ್ಷ ಮುತ್ತುರಾಜು, ಸಮಾಜದ ಮುಖಂಡರಾದ ರಂಗನಾಥ್, ಚನ್ನಯ್ಯ, ಕುಮಾರ್ ಹಾಗೂ ಮತ್ತಿತರರು ಇದ್ದರು.