ದಾವಣಗೆರೆ: ಚುನಾವಣೆ ಪೂರ್ವದ ಪ್ರಣಾಳಿಕೆಯಲ್ಲಿ ಹೇಳಿದ್ದ ಐದು ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.
ಸಚಿವರಾದ ಬಳಿಕ ಶನಿವಾರ, ತವರು ಜಿಲ್ಲೆಗೆ ಆಗಮಿಸಿದ ಸಚಿವರು, ಮೆರವಣಿಗೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ದಾವಣಗೆರೆ ಸೇರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರ್ಯಕರ್ತರ ಶ್ರಮ ಕಾರಣ. ಜನರು ಪ್ರತಿ ಬಾಗಿಲಿನಿಂದ ಬಂದು ಆಶೀರ್ವಾದ ಮಾಡಿದ್ದಾರೆ. ಅಧಿಕಾರ ಇರುತ್ತದೆ, ಹೋಗುತ್ತದೆ. ಅಧಿಕಾರಕ್ಕಿಂತ ಜನರ ವಿಶ್ವಾಸ ಮುಖ್ಯ. ಅದನ್ನು ಮುಂದುವರಿಸಿಕೊಂಡು ಹೋಗೋಣ ಎಂದು ತಿಳಿಸಿದರು.
ಕಳೆದ ಐದು ವರ್ಷದಲ್ಲಿ ಯಾರ‌್ಯಾರು ಲೂಟಿ ಮಾಡಿದರು ಎಂಬುದನ್ನು ಜನರು ಗಮನಿಸಿದ್ದಾರೆ. ನಾವು ಪ್ರಾಮಾಣಿಕವಾಗಿ ಜನಸೇವೆ ಮಾಡೋಣ. ವಿಧಾನಸಭೆ ಚುನಾವಣೆಯಂತೆಯೇ ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಗೆಲುವಿಗೆ ಕಾರ್ಯಕರ್ತರು ಹೋರಾಟ ಮಾಡಬೇಕಿದೆ ಎಂದರು.
ದಾವಣಗೆರೆ ನಗರಪಾಲಿಕೆ, ದೂಡಾದಲ್ಲಿ ಕಾಂಗ್ರೆಸ್ ಸದಸ್ಯ ಬಲ ಹೆಚ್ಚಿದ್ದರೂ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡು ನಮಗೆ ಆಡಳಿತ ಮಾಡಲು ಅವಕಾಶ ನೀಡಲಿಲ್ಲ. ಮುಂದಿನ ದಿನದಲ್ಲಿ ದಾವಣಗೆರೆ ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿ ಪಥದತ್ತ ಒಯ್ಯಲು ಎಲ್ಲರ ಸಹಕಾರ ಬೇಕು ಎಂದು ಹೇಳಿದರು.
---