ಕೆ.ಆರ್.ಪೇಟೆ: ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ್ದ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಸಂತೆಬಾಚಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಮುಖ್ಯಪ್ರಾಣ ಹನುಮಂತನ ಶಿಲಾವಿಗ್ರಹದ ಮರುಪ್ರತಿಷ್ಠಾನ ಮಹೋತ್ಸವ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ವಾತಂತ್ರೃ ನಂತರದಲ್ಲಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರಗಳಲ್ಲಿ 56 ಸಾವಿರ ಕೋಟಿ ರೂ. ಹಣವನ್ನು ಒಂದೇ ಬಾರಿಗೆ ಖರ್ಚು ಮಾಡಲು ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ನುಡಿದಂತೆ ನಡೆದು ಐತಿಹಾಸಿಕ ನಿರ್ಧಾರ ಮಾಡಿರುವ ಸರ್ಕಾರವೆಂದರೆ ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿ ಸರ್ಕಾರ ಕಾಂಗ್ರೆಸ್ ಜನತೆಗೆ ನೀಡಿರುವ ಐದು ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವೇ ಇಲ್ಲ, ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ ಎಂದೆಲ್ಲ ಅಪಪ್ರಚಾರ ನಡೆಸಿ ಜನತೆಯ ದಿಕ್ಕುತಪ್ಪಿಸಲು ಪ್ರಯತ್ನಿಸಿದರು. ಆದರೆ ರಾಜ್ಯದ ಜನತೆ ಕಾಂಗ್ರೆಸ್ ಸುಭದ್ರ ಸರ್ಕಾರ ಸ್ಥಾಪಿಸಲು 135 ಸ್ಥಾನಗಳನ್ನು ನೀಡಿ ಇತಿಹಾಸ ನಿರ್ಮಿಸಿದ್ದಾರೆ. ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ. ಐದು ಗ್ಯಾರಂಟಿಗಳನ್ನು ಈಡೇರಿಸಲು ಬೇಕಾದ ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸುವ ಸಾಮರ್ಥ್ಯ ಕಾಂಗ್ರೆಸ್ ಸರ್ಕಾರಕ್ಕಿದೆ. ಬಿಜೆಪಿ ಸರ್ಕಾರವು ನಡೆಸಿದ ದಿಕ್ಕುತಪ್ಪಿದ ಆಡಳಿತ ಯಂತ್ರವನ್ನು ಸರಿದಾರಿಗೆ ತಂದು ಜನಪರವಾದ ದಕ್ಷ ಪ್ರಾಮಾಣಿಕ ಆಡಳಿತ ನೀಡಲು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ ಎಂದರು.
ಗೂಡೆಹೊಸಳ್ಳಿ ಏತನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿ ಚನ್ನರಾಯಪಟ್ಟಣ, ಕೃಷ್ಣರಾಜಪೇಟೆ ಹಾಗೂ ನಾಗಮಂಗಲ ತಾಲೂಕಿನ ಕೆರೆ ಕಟ್ಟೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲು ಬದ್ಧನಾಗಿದ್ದೇನೆ. ರಾಜ್ಯದ ಕೃಷಿ ಸಚಿವನಾಗಿ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ. ಕೃಷಿ ಇಲಾಖೆಗೆ ಕಾಯಕಲ್ಪ ನೀಡಿ ರೈತಸ್ನೇಹಿ ಆಡಳಿತ ನೀಡುತ್ತೇನೆ ಎಂದು ಹೇಳಿದರು.
ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗಿ ಭಗವಂತನ ನಾಮಸ್ಮರಣೆ ಮಾಡಿ ಪೂಜಿಸಿ ಆರಾಧಿಸಿದರೆ ಸಾಕು, ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುವ ಜತೆಗೆ ಕೈಹಿಡಿದ ಕೆಲಸದಲ್ಲಿ ಯಶಸ್ಸು ಕೂಡ ದೊರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಚಿವರ ಜತೆ ಪತ್ನಿ ಧನಲಕ್ಷ್ಮೀ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದಂಪತಿಯನ್ನು ಗ್ರಾಮಸ್ಥರು ಸನ್ಮಾನಿಸಿಸಿದರು. ಶಾಸಕ ಎಚ್.ಟಿ.ಮಂಜು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಆರ್.ಲತಾ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಂ, ದಾನಿಗಳಾದ ಕೆ.ಬಾಗೇಗೌಡ, ಎಚ್.ಎ.ಕೆಂಪೇಗೌಡ, ಕರಿಕ್ಯಾತನಹಳ್ಳಿ ಹನುಮಂತೇಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಎ.ಕುಮಾರಸ್ವಾಮಿ, ತಹಸೀಲ್ದಾರ್ ನಿಸರ್ಗಪ್ರಿಯಾ ಮುಖಂಡರಾದ ಸಂತೆಬಾಚಹಳ್ಳಿ ನಾಗರಾಜು, ಸ್ಟುಡಿಯೋ ಜಯಕುಮಾರ್, ಶೀಳನೆರೆ ಮೋಹನ್ ಇತರರಿದ್ದರು.
ವೇದಬ್ರಹ್ಮ ಗೋಪಾಲಕೃಷ್ಣ ಅವಧಾನಿ. ಲಕ್ಷ್ಮೀನರಸಿಂಹ ಅಯ್ಯಂಗಾರ್, ನಾಗರಾಜು, ಸುರೇಶ್‌ಪೂಜಾ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು. ನೂತನ ದೇವಾಲಯದ ಶಿಲ್ಪಿಗಳಾದ ಕಾರ್ಕಳ ಶಶಿಕುಮಾರ್, ಮೈಸೂರು ಶ್ರೀನಿವಾಸ್, ಮಹಾಬಲಿಪುರಂನ ವಿಜಯಕುಮಾರ್‌ನ್ನು ಸನ್ಮಾನಿಸಲಾಯಿತು.