ಜಿಲ್ಲೆ

ನುಡಿದಂತೆ ನಡೆದ ಮಡಿವಾಳ ಮಾಚಯ್ಯ

ಚಾಮರಾಜನಗರ : ಬಸವಣ್ಣನವರ ನೇತೃತ್ವದ 12ನೇ ಶತಮಾನದ ಶರಣ ಚಳವಳಿಯಲ್ಲಿ ನುಡಿದಂತೆ ನಡೆದ ಮಡಿವಾಳ ಮಾಚಿದೇವಯ್ಯ ಶ್ರೇಷ್ಠ ಶಿವಶರಣರಾಗಿದ್ದರು ಎಂದು ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜಿಲ್ಲಾಡಳಿತ ಭವನದ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕುಲಗುರು ಶ್ರೀ ಮಡಿವಾಳ ಮಾಚಿದೇವರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಾಡಿನಲ್ಲಿ ಅಸ್ಪೃಶ್ಯತೆ, ಅನಕ್ಷರತೆ ತಾಂಡವವಾಡುತ್ತಿದ್ದ ಕಾಲಘಟ್ಟದಲ್ಲಿ, ಶಿವಶರಣ ಮಾಚಿದೇವರು ತಮ್ಮ ವಚನಗಳ ಮೂಲಕ ಜಗತ್ತಿಗೆ ಸಮಾನತೆ ಸಾರಿದರು. ಶ್ರೀ ಮಂಟೇಸ್ವಾಮಿ ಪರಂಪರೆಯಲ್ಲೂ ಶಿವಶರಣ ಮಡಿವಾಳ ಮಾಚಿದೇವರು ಸ್ವಾಮಿ ನಿಷ್ಠೆಯಿಂದ ನಡೆದುಕೊಂಡಿದ್ದರು. ಕ್ರಾಂತಿಕಾರಿ ವಿಚಾರಗಳಿಂದ ಹಾಗೂ ವಚನಗಳಿಂದ ಸಮಾಜದ ಕೊಳೆಯನ್ನು ತೊಳೆಯುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಸಮುದಾಯದ ಮುಖಂಡ ದುಂಡುಮಾದೇವ್ ಮಾತನಾಡಿ, ಮಡಿವಾಳ ಸಮುದಾಯವರು ಬಟ್ಟೆ ಹೊಗೆಯುವ ಕೆಲಸದಿಂದ ದೂರವಾಗುತ್ತಿದ್ದಾರೆ. ನಗರದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು 1 ಎಕರೆ ಜಾಗವನ್ನು ಕೊಡಿ ಎಂದು ಕೇಳುತ್ತಾ ಬಂದಿದ್ದೇವೆ. ಆದರೆ ಜನಪ್ರತಿನಿಧಿಗಳು ಯಾವುದೇ ಕ್ರಮವಹಿಸಿಲ್ಲ. ಕೇವಲ 20 ಗುಂಟೆ ಜಾಗವನ್ನಾದರೂ ಸಮುದಾಯಕ್ಕೆ ನೀಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನಾ), ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯ್ ಕುಮಾರ್ ಹಾಗೂ ಸಮುದಾಯದ ಮುಖಂಡರು ಹಾಜರಿದ್ದರು.

ಅಧಿಕಾರಿಗಳ ವಿರುದ್ಧ ಅಸಮಾಧಾನ:

ಶ್ರೀಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದ ಬಳಿಕ ಅಧಿಕಾರಿಗಳ ವಿರುದ್ಧ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಶಾಸಕರು ಬರುತ್ತಾರೆ ಎಂಬ ಮಾಹಿತಿ ನೀಡಿಲ್ಲ. ಸಮುದಾಯದವರು ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಅವಕಾಶ ಮಾಡಿಕೊಡಲಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯ್‌ಕುಮಾರ್ ಹಾಗೂ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ವಿರುದ್ಧ ಮುಖಂಡ ದುಂಡುಮಾದೇವ್ ಕಿಡಿಕಾರಿದರು.