ಜಿಲ್ಲೆ

ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ

ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಶನಿವಾರ ಸೆಸ್ಕ್ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಶೂನ್ಯ ದರ ರಸೀದಿ ನೀಡುವ ಮೂಲಕ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಚಾಲನೆ ನೀಡಿದರು. ಜಿ. ಅಶ್ವಿನಿ, ವೀಣಾ, ವಸಂತಕುಮಾರಿ, ಮಂಗಳಮ್ಮ ಇತರರಿದ್ದರು.

ಶ್ರೀರಂಗಪಟ್ಟಣ: ರಾಜ್ಯದ ಪ್ರತಿ ಮನೆಗಳಲ್ಲೂ ಜನರ ಬದುಕು ಸುಧಾರಿಸುವ ಹಾಗೂ ಬೆಳಕು ಮೂಡಿಸುವ ದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ರಾಜ್ಯಾದ್ಯಂತ ಏಕಕಾಲದಲ್ಲಿ ಅನುಷ್ಠಾನಗೊಳಿಸಿದ್ದು, ನಿಮ್ಮೆಲ್ಲರ ಸಹಕಾರ, ಹಾರೈಕೆ ಕಾಂಗ್ರೆಸ್ ಸರ್ಕಾರದ ಮೇಲಿರಲಿ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.


ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಶನಿವಾರ ಸೆಸ್ಕ್ ಇಲಾಖೆ ಆಯೋಜಿಸಿದ್ದ ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳಿಗೆ ಶೂನ್ಯ ದರದ ರಸೀದಿ ವಿತರಿಸಿ ಮಾತನಾಡಿದರು.


ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದ ಜನರಿಗೆ ನೀಡಿದ್ದ 5 ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಅಧಿಕಾರ ಹಿಡಿದ 2 ತಿಂಗಳಲ್ಲೇ ಜನರ ಬಳಕೆಗೆ ಜಾರಿಗೊಳಿಸಲು ಯಶಸ್ವಿಯಾಗಿದೆ. ಶಕ್ತಿ ಯೋಜನೆಯಡಿ ಸಾರಿಗೆ, ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ರೂ. ಪ್ರೋತ್ಸಾಹ ಧನ, ಬಡವರಿಗೆ ಅಕ್ಕಿ ಬದಲು ಹಣ, ಅಂತೆಯೇ ರಾಜ್ಯದ ಜನರ ಪಾಲಿಗೆ ಬೆಳಕು ತರುವ ಗೃಹಜ್ಯೋತಿಯನ್ನು ಶನಿವಾರವಾದಿಂದಲೇ ಜಾರಿಗೊಳಿಸುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎನ್ನಲು ಹರ್ಷ ತರಿಸಿದೆ. ಅದೇ ರೀತಿ ಯುವ ನಿಧಿ ಯೋಜನೆಯನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ಜಾರಿಗೊಳಿಸಲಿದೆ ಎಂದರು.


ಪ್ರಸ್ತುತ ಗೃಹಜ್ಯೋತಿ ಯೋಜನೆಗೆ ಕ್ಷೇತ್ರದ 55 ಸಾವಿರ ವಿದ್ಯುತ್ ಬಳಕೆದಾರ ಗ್ರಾಹಕರಲ್ಲಿ 45ಸಾವಿರ ಫಲಾನುಭವಿಗಳಾಗಲು ನೋಂದಾಯಿಸಿಕೊಂಡಿದ್ದು, ಬಾಕಿ ಇರುವ 9.5 ಸಾವಿರ ಗ್ರಾಹಕರು ಹತ್ತಿರದ ಸೇವಾ ಸಿಂಧು ಕೇಂದ್ರ, ಗ್ರಾಮ ಒನ್ ಅಥವಾ ಪಂಚಾಯಿತಿ ಕಾರ್ಯಾಲಯಗಳಲ್ಲಿ ನೋಂದಣಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ರಾಜ್ಯ ಸರ್ಕಾರ ವಾರ್ಷಿಕ 1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಎಲ್ಲ 5 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಕ್ರಮ ಕೈಗೊಂಡಿದ್ದು, ಯೋಜನೆಗಳು ಸದ್ಬಳಕೆಯಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಿ.ಅಶ್ವಿನಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಮಾತನಾಡಿದರು. ಪುರಸಭಾ ಸದಸ್ಯರಾದ ವಸಂತಕುಮಾರಿ ಲೋಕೇಶ್, ಮಂಗಳಮ್ಮ, ಪಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ, ಪುರಸಭಾ ಮುಖ್ಯಾಧಿಕಾರಿ ರಾಣಿ, ಸೆಸ್ಕ್ ಎಇಇ ಮಂಜುನಾಥ್, ಬಿಇಒ ಅನಂತರಾಜು ಉಪಸ್ಥಿತರಿದ್ದರು.