ಜಿಲ್ಲೆ

ನುಡಿದಂತೆ ಜನರ ನೆರವಿಗೆ ನಿಂತಿರುವುದು ನಮ್ಮ ಸರ್ಕಾರ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಮುಧೋಳದ ರೂಗಿ, ಗುಲಗಾಲ ಜಂಬಗಿ, ಚಿಂಚಖಂಡಿ ಬಿ.ಕೆ ಸೇರಿದಂತೆ ಹಲವು ಗ್ರಾಮಗಳಿಗೆ ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಅವರು ಭೇಟಿ ನೀಡಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿ, ಸನ್ಮಾನ ಸ್ವೀಕರಿಸಿದರು.

ರೂಗಿ, ಗುಲಗಾಲ ಜಂಬಗಿ, ಚಿಂಚಖಂಡಿ ಬಿ.ಕೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಸಚಿವ ಆರ್ ಬಿ ತಿಮ್ಮಾಪೂರ ಅವರು ಸನ್ಮಾನ ಸ್ವೀಕರಿಸಿ, ಕುಂದುಕೊರತೆಗಳನ್ನು ಆಲಿಸಿದರು.
ಸಚಿವರಾಗಿ ಮೊದಲ ಬಾರಿಗೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರೂಗಿ ಗ್ರಾಮಸ್ಥರು ಪ್ರೀತಿಯಿಂದ ಹೂಮಳೆಗೈದು ಅಭೂತಪೂರ್ವ ಸ್ವಾಗತ ನೀಡಿದರು. ಆರ್ ಬಿ ತಿಮ್ಮಾಪೂರ ಅವರು, ಮಂತ್ರಿಯಾದ ಹಿನ್ನೆಲೆಯಲ್ಲಿ ರೂಗಿ ಗ್ರಾಮದ ಜನರು ದುರ್ಗಾದೇವಿಗೆ ಈಡುಗಾಯಿ ಒಡೆದು ಹರಕೆ ತೀರಿಸಿದರು.

ಚಿಂಚಖಂಡಿ ಬಿ.ಕೆಯಲ್ಲಿ ಶಾಲೆಗೆ ಭೇಟಿ ನೀಡಿ ಕಟ್ಟಡಗಳ ದುಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು. ಸದ್ಯ ಎರಡು ಕಟ್ಟಡಗಳ ಕಾಮಗಾರಿ ನಡೆಯುತ್ತಿದ್ದು, ಉಳಿದ ಕಟ್ಟಡಗಳು ಮಳ ಬಂದಾಗ ಸೋರುತ್ತಿದ್ದು ಅವುಗಳನ್ನು ಶೀಘ್ರದಲ್ಲೇ ದುರಸ್ಥಿಗೊಳಿಸುವುದಾಗಿ ಸಚಿವ ತಿಮ್ಮಾಪೂರ ಅವರು ಭರವಸೆ ನೀಡಿದರು. ಇದೇ ವೇಳೆ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಮಾತನಾಡಿಸಿ, ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.

ಈ ಸನ್ಮಾನ ಎಲ್ಲವೂ ನಿಮಗೆ ಸೇರಬೇಕು. ಸಾಮಾನ್ಯ ಕುಟುಂಬದಿಂದ ಬಂದ ನನಗೆ ಮತ ನೀಡಿ, ಆಶೀರ್ವಾದ ಮಾಡಿ ಶಾಸಕರಾಗಿ ಮಾಡಿದ್ದೀರಾ… ನಮ್ಮ ಸರ್ಕಾರ ಅಧಿಕಾರ ಬಂದು ಸಚಿವನಾಗಿ ಕೆಲಸ ಮಾಡಲು ನೀವು ಕಾರಣ. ನಿಮ್ಮ ಈ ಪ್ರೀತಿಗೆ ತಲೆ ಬಾಗುತ್ತೇನೆ ಎಂದು ಸಚಿವ ಆರ್ ಬಿ ತಿಮ್ಮಾಪೂರ ಅವರು ಧನ್ಯವಾದ ಅರ್ಪಿಸಿದರು.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಚುನಾವಣೆಗೂ‌ ಮುನ್ನಾ ನಾವು ನೀಡಿದ್ದ ಗ್ಯಾರಂಟಿಗಳ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಆದ್ರೆ ನಾವು ಅಧಿಕಾರಕ್ಕೆ ಬಂದ ಬಳಿಕ ನಾವು ಏನು ಹೇಳಿದ್ವಿ, ಅದನ್ನ ಈಡೇರಿಸುವ ಕೆಲಸ ಮಾಡ್ತಿದ್ದೀವಿ ಎಂದು ಸಚಿವ ತಿಮ್ಮಾಪೂರ ಅವರು ಹೇಳಿದರು.