ಜಿಲ್ಲೆ

ನುಡಿ ಹಬ್ಬಕ್ಕೆ ಜುಮ್ಮಾ ಸಾರಥ್ಯ

ಔರಾದ್: 13ರಂದು ನಡೆಯಲಿರುವ ತಾಲೂಕು ಮಟ್ಟದ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಜಾನಪದ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸಂತಪುರದ ಸಾಹಿತಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸಂಜೀವಕುಮಾರ ಜುಮ್ಮಾ ನೇಮಕಗೊಂಡಿದ್ದಾರೆ. ಕಸಾಪ ತಾಲೂಕು ಕಾರ್ಯಕಾರಿಣಿ ಸಮಿತಿಯಲ್ಲಿ ಜುಮ್ಮಾ ನೇಮಕ ಸರ್ವಾನುಮತದಿಂದ ನಡೆದಿದೆ.

ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಜುಮ್ಮಾ ಸಾಕಷ್ಟು ಕೃಷಿ ಮಾಡುತ್ತಿದ್ದಾರೆ. ಶಿಕ್ಷಕ ವೃತ್ತ್ತಿ ಜತೆಗೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿ ವಿವಿಧ ಕೃತಿಗಳನ್ನು ರಚಿಸಿರುವುದು ವಿಶೇಷ. ಇವರ ಸಾಹಿತ್ಯ ಕ್ಷೇತ್ರದ ಸೇವೆ ಗುರುತಿಸಿ ಸರ್ವಾಧ್ಯಕ್ಷತೆ ಗೌರವ ನೀಡಲಾಗಿದೆ ಎಂದು ಪರಿಷತ್ ತಾಲೂಕು ಅಧ್ಯಕ್ಷ ಜಗನ್ನಾಥ ಮೂಲಗೆ ತಿಳಿಸಿದ್ದಾರೆ.

13ರಂದು ಡಾ.ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಸಮ್ಮೇಳನ ಅದ್ದೂರಿ, ಅರ್ಥಪೂರ್ಣವಾಗಿ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರನ್ನು ಸ್ವಾಗತ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿದೆ. ಬೆಳಗೆ 8ಕ್ಕೆ ಕನ್ನಡಾಂಬೆ ವೃತ್ತದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ವಿವಿಧ ಮಠಾಧೀಶರು, ಸಾಹಿತಿಗಳು, ವಿದ್ವಾಂಸರು, ಚಿಂತಕರು, ಜನಪ್ರತಿನಿಧಿಗಳು, ಕನ್ನಡಪರ ಸಂಘಟನೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಕನ್ನಡಾಭಿಮಾನಿಗಳು ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.