ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಪ್ರತಿಯೊಬ್ಬರಿಗೂ ದಿನದಲ್ಲಿ ಇರುವುದು 24 ಗಂಟೆಯೇ, ಅದನ್ನು ಹೇಗೆ ನಿರ್ವಹಣೆ ಮಾಡುತ್ತೇವೆ ಎಂಬುದರ ಮೇಲೆ ಯಶಸ್ಸು ನಿಂತಿರುತ್ತದೆ. ಯಾವುದೇ ಕೆಲಸ ಇರಲಿ ಅದನ್ನು ಎಂಜಾಯ್ ಮಾಡಬೇಕು. ಟೀಂ ವರ್ಕ್ ಮಾಡುವಾಗ ಅದರಲ್ಲಿ ನಿಮ್ಮ ಪಾತ್ರ ಏನೆಂಬುದನ್ನು ತಿಳಿಯಬೇಕು. ಅಂದಾಗ ಮಾತ್ರ ಯಾವುದೇ ಕ್ಷೇತ್ರ ಇರಲಿ ಅದರಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ರಾಜ್ಯ ಸರ್ಕಾರದ ಐಟಿ- ಬಿಟಿ, ಇಲೆಕ್ಟ್ರಾನಿಕ್ಸ್ ವಿಭಾಗದ ನಿರ್ದೇಶಕಿ ಸಿ.ಎನ್. ಮೀನಾ ನಾಗರಾಜ ಹೇಳಿದರು.
ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಇಲ್ಲಿಯ ಡೆನಿಸನ್ಸ್ ಹೋಟೆಲ್ನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ವಿಷನ್ ವತಿಯಿಂದ ಭಾನುವಾರ ಆಯೋಜನೆಗೊಂಡಿರುವ ಹುಬ್ಬಳ್ಳಿ ಧಾರವಾಡ ಬೆಳಗಾವಿ ಕ್ಲಸ್ಟರ್ ಮಟ್ಟದ ಟೆಕ್ ಉತ್ಸವದಲ್ಲಿ ‘ಕೆಲಸದಲ್ಲಿ ಮಹಿಳೆ’ ಕುರಿತು ಅವರು ಮಾತನಾಡಿದರು.
ದಿನಕ್ಕೆ ಕನಿಷ್ಠ 16-17 ತಾಸು ಕೆಲಸ ಮಾಡಬಹುದು. ಉದ್ಯಮಿ, ನೌಕರ ಯಾರೇ ಇರಬಹುದು ಅವರಲ್ಲಿನ ಪ್ರಯತ್ನಶೀಲತೆ ಮುಖ್ಯ. ಕೆಲಸದ ಸ್ಥಳದಲ್ಲಿ ಮಹಿಳೆಯರು ಪುರುಷರೊಂದಿಗೂ ಇರಬೇಕಾಗುತ್ತದೆ. ಅಲ್ಲಿ ಟೀಂ ವರ್ಕ್ಗೆ ಮಹತ್ವ ಕೊಡಬೇಕು. ಎಲ್ಲರನ್ನು ತೊಡಗಿಸಿಕೊಂಡಾಗ ಅದರ ಪ್ರತಿಫಲ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.
ಯಾವುದೇ ಕೆಲಸ ಇರಲಿ ಇದು ನನ್ನಿಂದಾಗದು ಎಂದು ಕೈ ಚೆಲ್ಲಬಾರದು. ಯಾವುದೇ ಇರಲಿ ಸುಲಭವಾಗಿ ದಕ್ಕುವುದಿಲ್ಲ. ಮುಂದಡಿ ಇಡಬೇಕು. ಪರಿಶ್ರಮ ಪಡಬೇಕು. ಸದ್ಯ ಹತ್ತಾರು ಸಂಸ್ಥೆಗಳು ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುತ್ತಿವೆ. ಸರ್ಕಾರದ ಹಲವು ಯೋಜನೆಗಳು ಪೂರಕವಾಗಿವೆ. ಅವುಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಿಇಒ ಸಂಜೀವ ಗುಪ್ತಾ ಕಾರ್ಯಕ್ರಮ ನಿರ್ವಹಿಸಿದರು.
ಮಹಿಳಾ ಗೋಷ್ಠಿ:
ಎಬಿಎಸ್ ಇಂಡಿಯಾ ಲಿಮಿಟೆಡ್ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯೆ ಸುಪ್ರಿಯಾ ಡಿ. ಅವರು ನಡೆಸಿಕೊಟ್ಟ ಮಹಿಳಾ ಗೋಷ್ಠಿಯಲ್ಲಿ ಐವರು ಸಾಧಕಿಯರು ತಮ್ಮ ಉದ್ಯಮ ಪಯಣದ ಅನುಭವ ಹಂಚಿಕೊಂಡರು.
ಮಾಹಿತಿ ಯುಗದಲ್ಲಿ ನಾವಿದ್ದು, ಲಭ್ಯ ಜ್ಞಾನವನ್ನು ಉತ್ತಮವಾಗಿ ಬಳಸಿಕೊಂಡರೆ ಅವಕಾಶಗಳು ತಾನಾಗಿಯೇ ತೆರೆದುಕೊಳ್ಳುತ್ತವೆ. ಮಾಹಿತಿ ಪಡೆದುಕೊಂಡು ನಾನೇನು ಮಾಡಬಲ್ಲೆ ಎಂಬ ಪ್ರಶ್ನೆ ಹಾಕಿಕೊಳ್ಳಬೇಕು. ಆಗ ಹತ್ತಾರು ಆಯ್ಕೆಗಳು ಮುಂದೆ ಬರುತ್ತವೆ ಎಂದು ಆಪ್ಸೆಕ್ಕೋ ಸಿಇಒ ಸ್ಮಿತಾ ಮಾಲಿಪಾಟೀಲ ಹೇಳಿದರು.
ಸೇಫ್ ಹ್ಯಾಂಡ್ಸ್ ಸರ್ವಿಸಸ್ ಸಂಸ್ಥಾಪಕಿ ಶ್ರಾವಣಿ ಪವಾರ ಮಾತನಾಡಿ, ಮದುವೆ ನಂತರ ಎಲ್ಲ ಮುಗಿದೇ ಹೋಯಿತು ಎನ್ನುವವರೇ ಹೆಚ್ಚು. ಅಂತಹ ಮಾತುಗಳಿಂದ ಯಾವುದೇ ಸಾಧನೆ ಆಗುವುದಿಲ್ಲ. ಮದುವೆ, ಮಕ್ಕಳು ಆದ ನಂತರವೂ ಉದ್ಯಮದಲ್ಲಿ ಅವಕಾಶಗಳಿವೆ. ಕುಟುಂಬದ ಸದಸ್ಯರಿಗೆ ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಮೊದಲು ಮನವರಿಕೆ ಮಾಡಬೇಕು. ಇದರಿಂದ ಕುಟುಂಬದ ಸಹಕಾರವೂ ಸಿಗುತ್ತದೆ ಎಂದು ಹೇಳಿದರು.
ಪುಣೆಯ ಲೀನಾ ಬೊಕಿಲ, ರೈಟ್ ಯುವರ್ ಡೆಸ್ಟಿನಿಯ ಟ್ರೇನಿಂಗ್ ಹೆಡ್ ಪಲ್ಲವಿ ಮಲಾನಿ, ಸಿಡಿಆರ್ ಪ್ರಸಾನಾ ಅವರು, ಮಹಿಳಾ ಉದ್ಯಮಶೀಲತೆ ಬಗ್ಗೆ ಮಾತನಾಡಿದರು.
---