ಹುಬ್ಬಳ್ಳಿ: ಸಿಆರ್ಎಫ್ ಅನುದಾನದಡಿ ಹುಬ್ಬಳ್ಳಿ ನೀಲಿಜಿನ್ ರಸ್ತೆಯಲ್ಲಿ ನಡೆಯುತ್ತಿರುವ ಸಿಮೆಂಟ್ ಕಾಂಕ್ರೀಟ್(ಸಿಸಿ) ರಸ್ತೆ ಕಾಮಗಾರಿ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ಅರ್ಧಕ್ಕೆ ನಿಂತಿದೆ.
ಈ ರಸ್ತೆಯ ಒಂದು ಬದಿ ಪಾಲಿಕೆ ನಿರ್ವಿುಸುತ್ತಿರುವ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಸಿಮೆಂಟ್ ರಸ್ತೆ ಕಾಮಗಾರಿ ಕೈಗೊಳ್ಳದಂತಾಗಿದೆ.
ಕಾಟನ್ ಮಾರ್ಕೆಟ್ನಿಂದ ಚನ್ನಮ್ಮ ವೃತ್ತ ಸಂರ್ಪಸುವ ನೀಲಿಜಿನ್ ರಸ್ತೆಯ ಎಡ ಬದಿ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡು, 2-3 ದಿನಗಳಿಂದ ವಾಹನ ಸಂಚಾರವೂ ಪ್ರಾರಂಭಗೊಂಡಿದೆ. ಆದರೆ ಈ ರಸ್ತೆಯ ಬಲ ಬದಿಯಲ್ಲಿ, ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಸಿಮೆಂಟ್ ರಸ್ತೆ ಕಾಮಗಾರಿ ಪ್ರಾರಂಭಿಸಲು ಅಸಾಧ್ಯವೆನ್ನುವಂತಾಗಿದೆ.
ಈ ರಸ್ತೆಯ ಬಲ ಬದಿ ಪಾಲಿಕೆಯಿಂದ ಅಂದಾಜು 14 ಲಕ್ಷ ರೂ. ವೆಚ್ಚದಲ್ಲಿ ಒಳಚರಂಡಿ ನಿರ್ಮಾಣ ಮಾಡಲಾಗಿದೆ. ಸುಮಾರು 10-12 ಅಡಿ ಆಳದಲ್ಲಿ ತಗ್ಗು ತೋಡಿ, ಕೊಳವೆಗಳನ್ನು ಅಳವಡಿಸಲಾಗಿದೆ. ಆದರೆ ಒಳಚರಂಡಿಗೆ ತೋಡಿದ ತಗ್ಗು ಮುಚ್ಚುವ ಕಾಮಗಾರಿ ಸಮರ್ಪಕವಾಗಿಲ್ಲ. ಕೇವಲ ಮಣ್ಣು ಹಾಕಿ ಮುಚ್ಚಲಾಗಿದೆ.
ಇದರ ಮೇಲೆ ಸಿಮೆಂಟ್ ರಸ್ತೆ ಮಾಡಿದಲ್ಲಿ ರಸ್ತೆ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಉಸುಕು ಹಾಕಿ, ತಗ್ಗನ್ನು ಗಟ್ಟಿಯಾಗಿ ಮುಚ್ಚುವಂತೆ ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ.
480 ಮೀ. ಉದ್ದದ ಒಳಚರಂಡಿಯ ತಗ್ಗನ್ನು ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಉಸುಕು, ಕಾಂಕ್ರಿಟ್ ಹಾಕಿ ಗಟ್ಟಿಗೊಳಿಸಲು ಪಾಲಿಕೆ ಇದೀಗ ಮುಂದಾಗಿದೆ. ಬುಧವಾರದಿಂದ ಈ ಕಾಮಗಾರಿ ಪ್ರಾರಂಭಗೊಳ್ಳಲಿದ್ದು, ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ನಂತರವಷ್ಟೇ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಗೊಳ್ಳಲಿದೆ.
ಒಳಚರಂಡಿಗೆ ತೋಡಿದ್ದ ತಗ್ಗನ್ನು ಉಸುಕು, ಕಾಂಕ್ರೀಟ್ ಹಾಕಿ ಗಟ್ಟಿಗೊಳಿಸಲು ಆಯುಕ್ತರು ಅನುಮತಿ ನೀಡಿದ್ದಾರೆ. ಈ ಕಾಮಗಾರಿ ಪೂರ್ಣಗೊಳಿಸಲು ಒಂದು ವಾರವಾದರೂ ಬೇಕು. | ಆನಂದ ಝುಳಕಿ ಪಾಲಿಕೆ ವಲಯ ಕಚೇರಿ 5ರ ಸಹಾಯಕ ಆಯುಕ್ತರು