ಚಿತ್ರದುರ್ಗ: ನಗರದ ಹೃದಯಭಾಗದ ನೀಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಸ್ವಾಮಿಯ ಕಡೇ ಕಾರ್ತಿಕ ದೀಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ರಾತ್ರಿ ಸಕಲ ಬಿರುದಾವಳಿಯೊಂದಿಗೆ ಅದ್ದೂರಿಯಾಗಿ ಜರುಗಿತು.
ಮಹೋತ್ಸವದ ಅಂಗವಾಗಿ ಸ್ವಾಮಿಗೆ ಮುಂಜಾನೆ ರುದ್ರಾಭಿಷೇಕ, ಅಷ್ಟೋತ್ತರ ಬಿಲ್ವಾರ್ಚನೆ ಸೇರಿ ಇತರೆ ಪೂಜೆ ನೆರವೇರಿತು. ವಿಶೇಷ ಪುಷ್ಪಾಲಂಕಾರ ಕಣ್ಮನ ಸೆಳೆಯಿತು. ದೀಪಾರಾಧನೆಗೆ ವೀರಶೈವ ಸಮಾಜದ ಮುಖಂಡರು ಚಾಲನೆ ನೀಡಿದರು.
ದೇಗುಲ ಮುಂಭಾಗ ಇಟ್ಟಿದ್ದ ಸಾಲು-ಸಾಲು ದೀಪಗಳನ್ನು ಹಚ್ಚುವ ಮೂಲಕ ಕಾರ್ತಿಕೋತ್ಸವಕ್ಕೆ ಭಕ್ತರು ಮೆರುಗು ನೀಡಿ, ಭಕ್ತಿ ಸಮರ್ಪಿಸಿದರು. ದರ್ಶನ ಪಡೆದು ಇಷ್ಟಾರ್ಥ ಈಡೇರಿಗೆಗಾಗಿ ಪ್ರಾರ್ಥಿಸಿದರು.
ಪಾರ್ವತಿ ದೇವಿ, ಗಣೇಶ, ವೀರಭದ್ರೇಶ್ವರ ಸಮೇತ ನೀಲಕಂಠೇಶ್ವರ ಸ್ವಾಮಿಯ ಹೂವಿನ ಪಲ್ಲಕ್ಕಿ ಮೆರವಣಿಗೆ ದೇಗುಲದ ಮುಂಭಾಗದಿಂದ ಹೊರಟು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ವೀರಗಾಸೆ ಕಲಾವಿದರು ಗಮನ ಸೆಳೆದರು. ನಂತರ ನೆರೆದಿದ್ದ ಭಕ್ತರಿಗೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.