ಜಿಲ್ಲೆ

ನೀರು ಸೇವನೆಯಿಂದ ವಾಂತಿ, ಭೇದಿ ಕಾಣಿಸಿಕೊಂಡಿಲ್ಲ

ಕೊಳ್ಳೇಗಾಲ: ನಗರಸಭೆಯಿಂದ ಸರಬರಾಜು ಮಾಡುವ ಕಾವೇರಿ ನೀರಿನಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ ಎಂದು ಗುರುವಾರ ನಗರಸಭೆ ಪೌರಾಯುಕ್ತ ರಮೇಶ್ ತಿಳಿಸಿದ್ದಾರೆ.

23ನೇ ವಾರ್ಡ್‌ಗೆ ಸೇರಿದ ಪಟ್ಟಣದ ನೂರ್ ಮೊಹಲ್ಲಾದಲ್ಲಿ ಕಲುಷಿತ ನೀರಿನಿಂದ ಸಾರ್ವಜನಿಕರಿಗೆ ಆರೋಗ್ಯದ ಮೇಲೆ ತೊಂದರೆಯಾಗಿರುವ ದೂರಿನ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆೆ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯಸರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ನೂರ್ ಮೊಹಲ್ಲಾದ 7ನೇ ಕ್ರಾಸ್ ಹಾಗೂ 5ನೇ ಕ್ರಾಸ್‌ನಲ್ಲಿನ 4 ಮನೆಯ 6 ಜನರಿಗೆ ವಾಂತಿ, ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಮನೆಯ ಸಂಪರ್ಕದ ನೀರನ್ನು ಪ್ರಯೋಗಾಲಯದಲ್ಲಿ ಪರಿಶೀಲಿಸಿದ್ದು, ಯಾವುದೇ ದೋಷಗಳು ಕಂಡು ಬಂದಿಲ್ಲ. ಕಲುಷಿತ ಆಹಾರ ಸೇವನೆಯಿಂದ ತೊಂದರೆಯಾಗಿರಬಹುದು. ಸಾರ್ವಜನಿಕರು ಆತಂಕ ಪಡಬಾರದು. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕುದಿಸಿ ಆರಿಸಿದ ನೀರನ್ನು ಕುಡಿಯಲು ಮುನ್ನೆಚ್ಚರಿಕೆ ಕ್ರಮ ವಹಿಸಲು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಇಬ್ಬರು ದಾಖಲು: ಪಟ್ಟಣದ 23ನೇ ವಾರ್ಡ್ ನೂರು ಮೊಹಲ್ಲಾದ ಬಡಾವಣೆಯ ಇಬ್ಬರು ನಿವಾಸಿಗಳು ವಾಂತಿ, ಭೇದಿ ಕಾಣಿಸಿಕೊಂಡು ಗುರುವಾರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ, ಒಬ್ಬರನ್ನು ಚಾಮರಾಜನಗರ ಸೀಮ್ಸ್ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಟಿಎಚ್‌ಒ ಡಾ.ಗೋಪಾಲ್ ತಿಳಿಸಿದ್ದಾರೆ.

ಅಧಿಕಾರಿಗಳಿಗೆ ಪತ್ರ: ನೂರ್ ಮೊಹಲ್ಲಾ ಬಡಾವಣೆಯಲ್ಲಿ ನಿವಾಸಿಗಳಿಗೆ ವಾಂತಿ, ಭೇದಿ ಕಾಣಿಸಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಗರಸಭೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ.ಸುರೇಶ್ ಕುಮಾರ್, ಕಿರಿಯ ಇಂಜಿನಿಯರ್ ಪಿ.ಎಸ್.ಲಕ್ಷ್ಮೀ ಅವರಿಗೆ ಪೌರಾಯುಕ್ತ ಎ.ರಮೇಶ್ ತಿಳಿವಳಿಕೆ ಪತ್ರ ನೀಡಿ ಎಚ್ಚರಿಸಿದ್ದಾರೆ.

ನೂರ್ ನೊಹಲ್ಲಾದಲ್ಲಿ ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರಿತವಾಗಿರುವ ಪರಿಣಾಮ ಸಾರ್ವಜನಿಕರಿಗೆ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಹರಿದಾಡುತ್ತಿದೆ. ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರಣವಾಗಿರುವ ಬಗ್ಗೆ ಸಂಬಂಧಪಟ್ಟವರಿಂದ ವರದಿ ಪಡೆಯಲು ಹಾಗೂ ಪ್ರತಿದಿನ ಕೇಂದ್ರ ಸ್ಥಾನದಲ್ಲಿದ್ದು ಕ್ರಮವಹಿಸಲು ಸೂಚಿಸಿದ್ದಾರೆ.

ನೀರು ಸರಬರಾಜು ಮೇಲುಸ್ತುವಾರಿ ನಿಮ್ಮ ಕರ್ತವ್ಯ. ಕೇಂದ್ರ ಸ್ಥಾನದಲ್ಲಿ ವಾಸವಿದ್ದು, ಸಾರ್ವಜನಿಕರ ಸೇವೆಗೆ ತುರ್ತಾಗಿ ಸ್ಪಂದಿಸಬೇಕು. ಆದರೆ, ನೀವು ಕೇಂದ್ರ ಸ್ಥಾನದಲ್ಲಿ ಇಲ್ಲದೆ ಮೈಸೂರಿನಲ್ಲಿ ವಾಸವಿರುವುದರಿಂದ ಇಂತಹ ಘಟನೆಗಳು ಸಂಭವಿಸುತ್ತಿದೆ. ಇದು ನಿಮ್ಮ ಬೇಜವಾಬ್ದಾರಿ ತೋರಿಸುತ್ತದೆ. ಈ ತಿಳಿವಳಿಕೆ ಪತ್ರ ತಲುಪಿದ 24 ಗಂಟೆಯೊಳಗೆ ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರಿತವಾಗುತ್ತಿರುವ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ನೀಡಬೇಕು. ಈ ಬಗ್ಗೆ ಕಚೇರಿಗೆ ವರದಿ ಸಲ್ಲಿಸಬೇಕು. ತಪ್ಪಿದಲ್ಲಿ ಮುಂದಿನ ಆಗು-ಹೋಗುಗಳಿಗೆ ಸಂಬಂಧಿಸಿದ ಅಧಿಕಾರಿ, ನೌಕರರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.