ಜಿಲ್ಲೆ

ನೀರು ವ್ಯಯವಾಗದಂತೆ ನಿಗಾ ವಹಿಸಿ

ವಿಜಯಪುರ: ಕುಡಿಯುವ ನೀರಿಗಾಗಿ ಆಲಮಟ್ಟಿ ಜಲಾಶಯದಿಂದ ಕಾಲುವೆ ಜಾಲಗಳ ಮೂಲಕ ಕೆರೆಗಳನ್ನು ತುಂಬಿಸಲಾಗುತ್ತಿದ್ದು, ನೀರು ವ್ಯಯವಾಗದಂತೆ ನಿಗಾ ವಹಿಸಲು ರಚಿಸಿದ ಸಮಿತಿ ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್​ ಸಭಾಂಗಣದಲ್ಲಿ ಬುಧವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ದಿನೇ ದಿನೆ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಕುಡಿಯುವ ನೀರಿಗೆ ಪ್ರಥಮಾದ್ಯತೆ ನೀಡಬೇಕು ಎಂದರು.

ಜಿಲ್ಲೆಯಾದ್ಯಂತ ಜನ&ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು.

ಕುಡಿಯುವ ನೀರಿನ ಉದ್ದೇಶಕ್ಕಾಗಿ ಆಲಮಟ್ಟಿ ಜಲಾಶಯದಿಂದ 2.50 ಟಿಎಂಸಿ ನೀರು ಕಾಲುವೆ ಜಾಲಗಳ ಮೂಲಕ ಹರಿಸಿ ಕೆರೆಗಳನ್ನು ತುಂಬಿಸುತ್ತಿದ್ದು, ಜಲಾಶಯದಿಂದ ಹರಿಸಿದ ನೀರು ಉದ್ದೇಶಿತ ಸ್ಥಳಕ್ಕೆ ತಲುಪುವಂತೆ ನಿಗಾವಹಿಸಬೇಕು. ನೀರಿನ ವ್ಯಯವಾಗದಂತೆ ನೋಡಿಕೊಳ್ಳಲು ರಚಿಸಿದ ಸಣ್ಣ ನೀರಾವರಿ ಇಲಾಖೆ, ಕುಡಿಯುವ ನೀರು ಸರಬರಾಜು ಇಲಾಖೆ, ಹೆಸ್ಕಾಂ, ಪೊಲೀಸ್​, ಪಂಚಾಯತ್​ ರಾಜ್​ ಇಲಾಖೆ ಸೇರಿದಂತೆ ವಿವಿಧ ಇಲಾಖೆಯನ್ನೊಳಗೊಂಡ ವಾಚ್​ ವಾರ್ಡ್​ ಸಮಿತಿ ತೀವ್ರ ನಿಗಾ ಇರಿಸಬೇಕು ಎಂದು ತಾಕೀತು ಮಾಡಿದರು.

ಅನಧಿಕೃತವಾಗಿ ಅಳವಡಿಸಿದ ಪಂಪ್​ಸೆಟ್​ಗಳನ್ನು ಹೆಸ್ಕಾಂ ಇಲಾಖೆಯಿಂದ ತೆರವುಗೊಳಿಸಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ಅಂತಹವರ ವಿರುದ್ಧ ಕಾನೂನಿನಡಿ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮೀಣ ಭಾಗದಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ಗ್ರಾ.ಪಂ. ವತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ತೆರೆದ ಕೊಳವೆ ಬಾವಿಗಳಿದ್ದಲ್ಲಿ ಕೂಡಲೇ ಯಾವುದೇ ಅನಾಹುತಕ್ಕೆ ಆಸ್ಪದ ಒದಗಿಸದೆ ಅಂತಹ ಕೊಳವೆ ಬಾವಿಗಳನ್ನು ಮುಚ್ಚಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.