ಹನೂರು: ಕುಡಿಯುವ ನೀರು ಹಾಗೂ ರಸ್ತೆ ಅಭಿವೃದ್ಧಿಗೆ 15ನೇ ಹಣಕಾಸು ಯೋಜನೆಯಡಿ ಉಳಿಕೆಯಾಗಿರುವ 28 ಲಕ್ಷ ರೂ.ಅನುದಾನವನ್ನು ಆದ್ಯತೆ ಮೇಲೆ ಬಳಕೆ ಮಾಡುವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮುಮ್ತಾಜ್ ಬಾನು ತಿಳಿಸಿದರು.
ಪಟ್ಟಣ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಅವರು ಮಾತನಾಡಿ, 15ನೇ ಹಣಕಾಸು ಎಸ್‌ಎಫ್‌ಸಿ ಯೋಜನೆಯಡಿ ಬಿಡುಗಡೆಯಾಗಿದ್ದ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳು ಪೂರ್ಣಗೊಂಡಿದ್ದು, 28.65 ಲಕ್ಷ ರೂ.ಅನುದಾನ ಉಳಿಕೆಯಾಗಿದೆ. ಈ ಅನುದಾನದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ 10.62 ಲಕ್ಷ ರೂ.ಹಾಗೂ ಬೋರ್‌ವೆಲ್ ಕೊರೆಸಲು 18.03 ಲಕ್ಷ ರೂ.ಅನುದಾನ ಮೀಸಲೀರಿಸಿದೆ. ಆದ್ದರಿಂದ ಯಾವ ವಾರ್ಡ್‌ನಲ್ಲಿ ಕುಡಿಯುವ ನೀರು ಹಾಗೂ ಮೂಲಸೌಕರ್ಯಗಳ ಕೊರತೆ ಇದೆಯೋ ಆ ವಾರ್ಡ್‌ಗಳಿಗೆ ಈ ಅನುದಾನವನ್ನು ಬಳಸಿಕೊಳ್ಳಬೇಕು. ಇದಕ್ಕೆ ಎಲ್ಲರ ಸಹಕಾರ ನೀಡಬೇಕು ಎಂದು ತಿಳಿಸಿದರು.
ಇದೇ ವೇಳೆ ಪಪಂ ಖಾಸಗಿ ಬಸ್ ನಿಲ್ದಾಣ ಹಾಗೂ ತಹಸೀಲ್ದಾರ್ ಕಚೇರಿ ಪ್ರವೇಶ ದ್ವಾರದಲ್ಲಿರುವ ಶೌಚಗೃಹಕ್ಕೆ ಟೆಂಡರ್ ನೀಡುವ ಬಗ್ಗೆ ಅನುಮೋದನೆ ನೀಡಲಾಯಿತು.
ಪಪಂ ಉಪಾಧ್ಯಕ್ಷ ಆನಂದ್‌ಕುಮಾರ್, ಸದಸ್ಯರಾದ ಪವಿತ್ರಾ, ಮಂಜುಳಾ, ಲತಾಮಣಿ, ಗಿರೀಶ್, ಸಂಪತ್‌ಕುಮಾರ್, ಸೋಮಶೇಖರ್, ಸುದೇಶ್, ಮಹೇಶ್‌ನಾಯ್ಕ, ಬಸವರಾಜು, ಎಂ. ಮಹಾದೇಶ್, ನವೀನ್, ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಇಂಜಿನಿಯರ್ ನಾಗರಾಜು, ಕಚೇರಿ ನೌಕರರು ಇದ್ದರು.