ಜಿಲ್ಲೆ

ನೀರು, ಮೇವು ಸಮಸ್ಯೆಯಾದ್ರೆ ಕ್ರಮ

ಕಲಬುರಗಿ: ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕುಡಿಯುವ ನೀರು, ಜಾನುವಾರು ಮೇವಿನ ಸಮಸ್ಯೆ ಮುಂಜಾಗ್ರತೆ ಕುರಿತು ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಬೇಸಿಗೆ ಸಮೀಪಿಸುತ್ತಿದ್ದು, ಶೇ.೪೦ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಬಿಸಿ ಗಾಳಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆಯಾಗಿ ಕಾರ್ಯಯೋಜನೆ ರೂಪಿಸಿ, ನೀರಿನ ಅಭಾವ ಆಗದಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಯಾವುದೇ ತಾಲೂಕು ಬರ ಪೀಡಿತ ಪ್ರದೇಶ ಎಂದು ಘೋಷಿಸಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಎಸ್.ಡಿ.ಆರ್.ಎಫ್. ಅನುದಾನ ಬಳಸಲು ಅವಕಾಶವಿಲ್ಲ ಎಂದರು.

ಖಾಸಗಿ ಕೊಳವೆ ಬಾವಿ, ತೆರೆದ ಬಾವಿ, ಟ್ಯಾಂಕರ್ ಸಾಗಣೆ ವೆಚ್ಚವನ್ನು ಗ್ರಾಪಂ ೧೫ನೇ ಹಣಕಾಸು ಯೋಜನೆ ಅಡಿ ಲಭ್ಯ ಅನುದಾನದಿಂದ ಭರಿಸತಕ್ಕದ್ದು. ಕೆಎನ್‌ಎನ್‌ಎಲ್ ಜಲನಿಗಮದ ಕಾಲುವೆಗಳ ಮೂಲಕ ಹರಿಸುತ್ತಿರುವ ನೀರನ್ನು ಕುಡಿಯುವ ನೀರಿಗೆ ಬಳಸಿಕೊಳ್ಳಬೇಕು ಅಥವಾ ಕೆರೆ ಶೇಖರಣೆ ಮಾಡಿಕೊಳ್ಳಬೇಕು ಎಂದರು.

ನೀರಿನ ಸಮಸ್ಯೆ ಉದ್ಭವಿಸದಂತೆ, ರೈತರಿಗೆ ನೀರಾವರಿ ಸಮಸ್ಯೆ ಆಗದಂತೆ ತಿಳುವಳಿಕೆ ನೀಡಿ, ಕೆಲ ಸ್ಥಳಗಳಿಗೆ ಸ್ವತಃ ಭೇಟಿ ಮಾಡಿ, ಸಮಸ್ಯೆ ಬಗೆಹರಿಸಬೇಕು. ಜೇವರ್ಗಿ ಮತ್ತು ಅಫಜಲಪುರ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಂಭವವಿದ್ದು, ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಯಾವುದೇ ಅನುದಾನ ಕೊರತೆ ಇಲ್ಲ. ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ, ಅರಣ್ಯ ಪ್ರದೇಶಗಳಲ್ಲಿ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ, ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ, ಕಚೇರಿಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್‌ಸಿAಗ್ ಮೀನಾ ಮಾತನಾಡಿ, ಗ್ರಾಪಂ, ತಾಪಂಗಳಲ್ಲಿ ಇಒ, ಪಿಡಿಒಗಳು ಕೂಡಿ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅನುದಾನ ಬಳಸಿ, ಸಮರ್ಪಕ ವ್ಯವಸ್ಥೆ ಮಾಡಬೇಕು ಎಂದರು.

ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಮಾತನಾಡಿದರು. ಸಹಾಯಕ ಆಯುಕ್ತರಾದ ಸಾಹಿತ್ಯ, ಪ್ರಭು ರೆಡ್ಡಿ, ಎಡಿಸಿ ರಾಯಪ್ಪ ಹುಣಸಗಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮ್ಮದ್‌ಪಟೇಲ್, ಡಿಎಚ್‌ಓ ಡಾ.ಶÀರಣಬಸಪ್ಪ ಕ್ಯಾತನಾಳ ಇತರರಿದ್ದರು.

ನಗರಕ್ಕೆ ೫೫ ಟ್ಯಾಂಕರ್: ಕಲಬುರಗಿ ನಗರದಲ್ಲಿ ೩೫೦ ಕೊಳವೆ ಬಾವಿ ದುರಸ್ತಿ ಮಾಡಬೇಕಿದ್ದು, ಎಲ್ ಆ್ಯಂಡ್ ಟಿ, ಕೆಐಡಿಎಫ್‌ಸಿ ಜತೆ ಚರ್ಚಿಸಲಾಗಿದೆ. ನೀರಿನ ಕೊರತೆ ಇರುವುದಿಲ್ಲ. ಎಲ್ ಆ್ಯಂಡ ಟಿ ೫೫ ಟ್ಯಾಂಕರ್‌ಗಳ ನೀರು ಪೂರೈಸಲು ಸೂಚಿಸಲಾಗಿದೆ. ಪ್ರಸ್ತುತ ಐದು ಟ್ಯಾಂಕರ್ ನೀರಿನ ಅಭಾವ ಇರುವ ಪ್ರದೇಶಕ್ಕೆ ನೀರು ಸರಬರಾಜು ಮಾಡಲಾಗುತ್ತದೆ. ನೀರಿನ ಸಮಸ್ಯೆಗಳಿದ್ದಲ್ಲಿ ಕ್ರಮವಹಿಸಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಹೇಳಿದರು.