ವಿಜಯಪುರ: ನೀರನ್ನು ಮಿತವಾಗಿ ಬಳಸದಿದ್ದರೆ ಮುಂದಿನ ಒಂದು ದಶಕದಲ್ಲಿ ಜಲಸಂಕಷ್ಟ ಎದುರಾಗಲಿದೆ. ಈಗಿನಿಂದಲೇ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಗರದ ಬಿಎಲ್‌ಡಿಇ ಸಂಸ್ಥೆಯ ವಚನಪಿತಾಮಹ ಡಾ. ಫ.ಗು. ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜಿನ ಗ್ರಾಮೀಣ ಪುನಶ್ಚೇತನ ಕೇಂದ್ರ ಉದ್ಘಾಟನೆ ಮತ್ತು ಸಾವಯವ ಕೃಷಿ ಪದ್ಧತಿ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆ ಕಾರ್ಯಾಗಾರಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕುಡಿಯಲು, ಕೃಷಿ ಮಾಡಲು, ಕೈಗಾರಿಕೆಗಳು ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ನೀರು ಅತೀ ಮುಖ್ಯವಾಗಿದೆ. ಈ ನೀರನ್ನು ಹಿತವಾಗಿ ಮತ್ತು ಮಿತವಾಗಿ ಬಳಸಬೇಕು. ಹನಿ(ಡ್ರಿಪ್) ನೀರಾವರಿ ಪದ್ಧತಿ ಈಗ ಮಹತ್ವ ಪಡೆದಿದ್ದು, ಇದನ್ನು ಅಳವಡಿಸಿಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಕೃಷಿಗೆ ಅಧಿಕ ನೀರು ಬೇಕಾಗುವ ಬೆಳೆಗಳನ್ನು ನಿಷೇಧಿಸುವ ಪರಿಸ್ಥಿತಿ ಎದುರಾಗಲಿದೆ ಎಂದರು.
ಕಬ್ಬು ಬೆಳೆಗಾರರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ಅಧಿಕ ಇಳುವರಿಯ ಜೊತೆಗೆ ಆದಾಯವೂ ಹೆಚ್ಚಾಗಲಿದೆ. ಸಕ್ಕರೆ ಕಾರ್ಖಾನೆಗಳಿಗೆ ಉತ್ಪಾದನೆಯಲ್ಲಿ ಹೆಚ್ಚಿನ ಇಳುವರಿ ಸಿಗಲಿದೆ. ಅಲ್ಲದೇ, ಹೆಚ್ಚು ನೀರು ಬಳಕೆಯಿಂದ ಜಮೀನು ಹಾಳಾಗುವುದು ತಪ್ಪಲಿದೆ. ರೈತರಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಅಗತ್ಯವಾಗಿರುವ ಸಲಕರಣೆಗಳನ್ನು ಒದಗಿಸುವ ಹೆಸರಾಂತ ಕಂಪನಿಗಳು ಮತ್ತು ಸಕ್ಕರೆ ಕಾರ್ಖಾನೆಗಳ ಸಹಭಾಗಿತ್ವದಲ್ಲಿ ನೆರವು ಒದಗಿಸಲು ಈ ಗ್ರಾಮೀಣ ಪುನಶ್ಚೇತನ ಕೇಂದ್ರ ಕ್ರಮ ಕೈಗೊಳ್ಳಬೇಕು. ಇದರಿಂದ ನೀರು ಉಳಿತಾಯ ಸಾಧ್ಯ. ಅಲ್ಲದೇ, ಹನಿ ನೀರಾವರಿಗಾಗಿ ರೈತರು ಸಲಕರಣೆಗಳ ಖರೀದಿಗೆ ಖರ್ಚು ಮಾಡುವ ಹಣ ಕೇವಲ ಎರಡು ವರ್ಷಗಳಲ್ಲಿ ಬೇರೆ ಬೇರೆ ರೂಪದಲ್ಲಿ ರೈತರಿಗೆ ಮರಳಲಿದೆ ಎಂದು ಅವರು ಹೇಳಿದರು.
ತೋಟಗಾರಿಕೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶ್ರೀಪಾದ ವಿಶ್ವೇಶ್ವರ ರೈತರಿಗೆ ಮಾರ್ಗದರ್ಶನ ಮಾಡಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪ ಸಂತೋಷ ಎಚ್. ಚಪ್ಪರ ಮಾತನಾಡಿ, ಗ್ರಾಮೀಣ ಪುನಶ್ಚೇತನ ಕೇಂದ್ರದ ಧ್ಯೋಯೋದ್ದೇಶಗಳನ್ನು ವಿವರಿಸಿದರು.
ಪ್ರಾಚಾರ್ಯ ಡಾ. ವಿ.ಜಿ. ಸಂಗಮ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಸಿದರೆಡ್ಡಿ ಪ್ರಾರ್ಥಿಸಿದರು. ವಿಶ್ವನಾಥ ಹಿರೇಮಠ ನಿರೂಪಿಸಿದರು. ಡಾ. ನವೀನ ದೇಸಾಯಿ ವಂದಿಸಿದರು. ರೈತರಾದ ಭೀವಾನಾಮಾ ಮಾನವರ, ಧರ್ಮಾ ಮಾನವರ, ಅಫಾ ದೇಬಾಕರೆ, ಚಂದ್ರಶೇಖರ ಜಂಗಮಶೆಟ್ಡಿ ಮತ್ತಿತರರಿದ್ದರು.