ಜಿಲ್ಲೆ

ನೀರು ಪೋಲು ಮಾಡುವವರ ವಿರುದ್ಧ ಕ್ರಮ ವಹಿಸಿ

ಹರಪನಹಳ್ಳಿ: ರೈತರಿಗೆ ಸರ್ಕಾರಿ ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿ ಒದಗಿಸಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಿ.ಸಿ.ಉಮೇಶ್‌ಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಸೂಚಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸೋಮವಾರ ಮಾತನಾಡಿದರು. ಚಿಗಟೇರಿ ಗ್ರಾಮದ ನಾರದಮುನಿ ದೇವಸ್ಥಾನದ ಮುಂದೆ ಹರಿಯುವ ನೀರನ್ನು ತಡೆದು ಬಳಕೆಗೆ ಒದಗಿಸಬೇಕು. ಜನರು ಮೋಟಾರ್ ಆನ್ ಮಾಡಿ ನೀರಿನ ಪೋಲು ಮಾಡುತ್ತಿದ್ದು, ಅಂತಹವರ ವಿರುದ್ಧ ಕ್ರಮವಹಿಸಬೇಕು. ನಿಟ್ಟೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಗ್ಗಂಟಾಗಿದ್ದು, ಆದಷ್ಟು ಬೇಗ ಪರಿಹರಿಸಲು ಸೂಚಿಸಿದರು.

ಟಿಎಚ್‌ಒ ಪೃಥ್ವಿ ಮಾತನಾಡಿ, ಗುಂಡಗತ್ತಿ ಹೊರತು ಪಡಿಸಿದರೆ ಉಳಿದೆಡೆ ಬಹುತೇಕ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗಿದೆ. ಆ್ಯಂಬ್ಯುಲೆನ್ಸ್ ವಾಹನ ಚಾಲಕರ ಹುದ್ದೆ ಖಾಲಿ ಇದೆ. ಆರೋಗ್ಯ ಕೇಂದ್ರಗಳಿಗೆ ಒಂದು ವಾರದಲ್ಲಿ ಔಷಧ ಬರಲಿದೆ. ಇಲಾಖೆಯ ಕಾಯ್ದೆ ಉಲ್ಲಂಘಿಸಿ ಗ್ರಾಮೀಣ ಭಾಗದಲ್ಲಿ ನಕಲಿ ವೈದ್ಯರನ್ನು ಗುರುತಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಟಿ.ತುಂಬಿಗೆರೆಯಲ್ಲಿ ಡೆಂೆಯಿಂದ ಮಹಿಳೆ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಕಸದ ತಿಪ್ಪೆ ತೆರವುಗೊಳಿಸಿ ಒಂದು ವಾರದಲ್ಲಿ ಎರಡು ಬಾರಿ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು ಎಂದು ಶಾಸಕಿ ಸೂಚಿಸಿದರು.

ಹೊಸದಾಗಿ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಸಾಲ ಸೌಲಭ್ಯ, ಅಂತರ ಬೆಳೆ, ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆಯಡಿ 75 ಲಕ್ಷ ರೂ. ಸಹಾಯಧನ ಒದಗಿಸಲಾಗಿದೆ ಎಂದು ತೋಟಗಾರಿಗೆ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ಬಿಇಒ ಎಚ್.ಲೇಪಾಕ್ಷಪ್ಪ ಮಾತನಾಡಿ, ಶಿಕ್ಷಣ ಇಲಾಖೆ ಆದೇಶದನ್ವಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ 29 ಅಂಶಗಳ ಯೋಜನೆ ಜಾರಿಗೊಳಿಸಲಾಗಿದೆ. ಇದರಿಂದ ಕಲಿಕೆಯಲ್ಲಿ ಹಿಂದುಳಿದ ವಕ್ಕಳ ಸುಧಾರಣೆಗೆ ಅನುಕೂಲವಾಗಲಿದೆ ಎಂದರು.

ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಶಿವಕುಮಾರ್ ಮಾತನಾಡಿ, ಕಾಯಿಲೆ ಮತ್ತು ಹಲವು ಕಾರಣಗಳಿಂದ ಸಾಯುವ ಪ್ರತಿ ಕುರಿಗೆ 7500 ರೂ, ಹಾಗೂ ಜಾನುವಾರು ಸಾವಿಗೆ 15 ಸಾವಿರ ರೂ.ಗೆ ಪರಿಹಾರವನ್ನು ಸರ್ಕಾರ ಹೆಚ್ಚಳ ಮಾಡಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ, ಸಮಾಜ ಕಲ್ಯಾಣಾಧಿಕಾರಿ ಭೀಮಪ್ಪ, ನೀರಾವರಿ ಇಲಾಖೆ ಇಂಜಿನಿಯರ್ ಕಿರಣ್ ನಾಯ್ಕ, ಗಂಗಪ್ಪ, ವಿವಿಧ ಇಲಾಖೆ ಅಧಿಕಾರಿಗಳಿದ್ದರು.