ಕಿಕ್ಕೇರಿ: ಮಂದಗೆರೆ ನಾಲೆ ತಾಲೂಕಿನ ರೈತರಿಗೆ ಜೀವನಾಡಿಯಂತಿದ್ದು, ಬರಪೀಡಿತ, ಮಳೆ ಆಶ್ರಿತ ಪ್ರದೇಶಗಳಿಗೆ ನೀರುಹರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು.
ಸಮೀಪದ ಮಂದಗೆರೆಯ ಹೇಮಾವತಿ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ನೀರುಹರಿಸುವ ಕ್ರಸ್ಟ್‌ಗೇಟ್‌ಗಳಿಗೆ ಗುರುವಾರ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಬಾರಿ ಸಕಾಲದಲ್ಲಿ ಮಳೆಬಾರದೆ ರೈತರಿಗೆ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ. ಸದ್ಯದ ಸ್ಥಿತಿಯಲ್ಲಿ ಹೇಮಾವತಿ ಜಲಾಶಯದಲ್ಲಿ 29 ಟಿಎಂಇಸಿ ನೀರು ಸಂಗ್ರಹವಿದೆ. ಸರ್ಕಾರಕ್ಕೆ ರೈತರ ಸಮಸ್ಯೆ ತಿಳಿಸಿ ಒತ್ತಡ ಹಾಕಿ ತಾಲೂಕಿನ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಅನುಮತಿ ಪಡೆಯಲಾಗಿದೆ ಎಂದರು.
ರೈತರು ನೀರನ್ನು ಪೋಲಾಗದಂತೆ ಸದ್ಭಳಕೆ ಮಾಡಿಕೊಂಡು, ಕೆರೆಕಟ್ಟೆ, ಬೋರ್‌ವೆಲ್ ಅಂತರ್ಜಲ ವೃದ್ಧಿಸಿಕೊಳ್ಳಲು ಮುಂದಾಗುವಂತೆ ಕಿವಿಮಾತು ಹೇಳಿದ ಅವರು, ಕಟ್ಟುನೀರಿನ ಪದ್ಧತಿಯಲ್ಲಿ ನಾಲೆಯಲ್ಲಿ ನೀರು ಬಿಡಲಾಗುತ್ತಿದ್ದು, ರೈತರು ನೀರಿನ ಸೌಲಭ್ಯ ಅರಿತು ಬೇಸಾಯ ಮಾಡಿ ಎಂದು ಮನವಿ ಮಾಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮು, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಪುಟ್ಟೇಗೌಡ, ಮಂದಗೆರೆ ಅಣೆಕಟ್ಟು ವ್ಯಾಪ್ತಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಆನಂದ್, ಸಹಾಯಕ ಎಂಜಿನಿಯರ್‌ನಾಯಕ್, ರಂಗೇಗೌಡ, ಪ್ರತಾಪ್, ನಂದೀಶ್ ಮತ್ತಿತರರಿದ್ದರು.