ಜಿಲ್ಲೆ

ನೀರು ಪೂರೈಕೆ ವ್ಯವಸ್ಥೆ ಖಾಸಗಿಗೆ ಬೇಡ

ಧಾರವಾಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹು-ಧಾ ಮಹಾನಗರ ಸಭೆಯ ನೀರು ಸರಬರಾಜು ವಿಭಾಗದ ದಿನಗೂಲಿ, ಗುತ್ತಿಗೆ ಹಾಗೂ ಹಂಗಾಮಿ ನೌಕರರ ಸಂಘ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ.

ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಹಾಗೂ ನೀರು ಸರಬರಾಜು ವ್ಯವಸ್ಥೆಯನ್ನು ಖಾಸಗಿ ಕಂಪನಿಗೆ ಹಸ್ತಾಂತರಿಸುವುದನ್ನು ವಿರೋಧಿಸಿ ಮೆರವಣಿಗೆ ಮೂಲಕ ಜಲ ಮಂಡಳಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ನೌಕರರು, ಕೆಲ ಹೊತ್ತು ಪ್ರತಿಭಟನೆ ನಡೆಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ನೀರು ಪೂರೈಕೆ ವ್ಯವಸ್ಥೆಯನ್ನು ಖಾಸಗಿ ಕಂಪನಿಗೆ ನೀಡಿದಲ್ಲಿ ಗುತ್ತಿಗೆ ನೌಕರರಿಗೆ ಸಂಕಷ್ಟ ಎದುರಾಗುವುದು ನಿಶ್ಚಿತ. ಹೀಗಾಗಿ, ಖಾಸಗಿ ಕಂಪನಿಗೆ ಹಸ್ತಾಂತರ ಮಾಡುವ ಬದಲು ಯಥಾಸ್ಥಿತಿ ಮುಂದುವರಿಸಬೇಕು. ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಹಲವು ಬಾರಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಕೂಡಲೆ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಮಂಜುನಾಥ ಮಾನೆ, ಮಹೇಶ ಪಾಟೀಲ, ಸುಭಾಷ ಜಗದಾಳೆ, ಈರಣ್ಣ ಸೂಳಿಭಾವಿ, ಶಿವು ಕಲ್ಲೇದ, ಅಶೋಕ ಪಾಟೀಲ, ಸಾಗರ ಪಾಟೀಲ, ಶೌಕತ್ ಕುಸುಗಲ್, ಮಹಾಂತೇಶ ಗೌಡರ, ಪ್ರದೀಪ ಗುಮ್ಮಗೋಳ, ಮಂಜುನಾಥ ಹುಡೇದ, ಎಂ.ಆರ್. ಪಾಟೀಲ, ಬಸವರಾಜ ಜಕ್ಕನಗೌಡರ, ಇತರರು ಇದ್ದರು.