ಜಿಲ್ಲೆ

ನೀರು ಪೂರೈಕೆ ನಿರ್ವಹಣೆ ಈಗ ಸ್ಮಾರ್ಟ್!

ಸುಭಾಸ ಧೂಪದಹೊಂಡ ಕಾರವಾರ

ಕುಡಿಯುವ ನೀರು ಪೂರೈಸುವ ಟ್ಯಾಂಕರ್ ಚಾಲಕ ಕೂಡ ಈಗ ಸ್ಮಾರ್ಟ್ ಫೋನ್ ಹೊಂದಿರಬೇಕು!

ಹೌದು, ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಯಲ್ಲಿ ಆಗುವ ಅಕ್ರಮ ತಡೆಯಲು ರಾಜ್ಯ ಸರ್ಕಾರ ‘ವಾಟರ್ ಟ್ಯಾಂಕರ್ ಮ್ಯಾನೇಜ್​ವೆುಂಟ್ ಸಿಸ್ಟ್ಂ’ ಎಂಬ ಹೊಸ ಆಪ್ ಜಾರಿಗೆ ತಂದಿದೆ. ಇದರಲ್ಲಿ ಕುಡಿಯುವ ನೀರು ಪೂರೈಸುವ ಗ್ರಾಮದ ಮಾಹಿತಿ, ನೀರು ಪಡೆದ ಗ್ರಾಮಸ್ಥರ ಫೋಟೋ ಹಾಗೂ ವಿಡಿಯೋವನ್ನು ಅಪ್​ಲೋಡ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.

ಈ ಆಪ್ ಬಳಕೆ ಬಗ್ಗೆ ಈಗಾಗಲೇ ಎಲ್ಲ ತಾಲೂಕುಗಳ ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ವಿಷಯ ನಿರ್ವಾಹಕರಿಗೆ ತರಬೇತಿ ನೀಡಲಾಗಿದೆ. ಟೆಂಡರ್ ಪಡೆದ ಗುತ್ತಿಗೆದಾರರು ನೀಡುವ ಚಾಲಕನಿಗೆ ಈ ಆಪ್ ಬಳಕೆಗೆ ತರಬೇತಿ ನೀಡಬೇಕಿದೆ.

ಏಕೆ ಈ ಕ್ರಮ?: ಬರ ಪರಿಸ್ಥಿತಿಯನ್ನು ವರವಾಗಿಸಿಕೊಳ್ಳುವ ಕೆಲವು ಅಧಿಕಾರಿಗಳು ಟ್ಯಾಂಕರ್ ಪೂರೈಕೆ ನೆಪದಲ್ಲಿ ಬೇಕಾಬಿಟ್ಟಿ ಬಿಲ್ ಮಾಡುತ್ತಿದ್ದರು. ಕಳೆದ ಕೆಲ ವರ್ಷಗಳಿಂದ ಟ್ಯಾಂಕರ್​ಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡಲಾಗಿತ್ತು. ನೀರು ಕೊಟ್ಟ ಗ್ರಾಮಸ್ಥರಿಂದ ಸಹಿ ಪಡೆಯುವುದನ್ನೂ ಕಡ್ಡಾಯ ಮಾಡಲಾಗಿತ್ತು. ಆದರೂ ಅಕ್ರಮ ತಪ್ಪದ ಹಿನ್ನೆಲೆಯಲ್ಲಿ ಈಗ ಸ್ಮಾರ್ಟ್ ವ್ಯವಸ್ಥೆ ಜಾರಿ ಮಾಡಲಾಗಿದೆ.

251 ಗ್ರಾಮಗಳಲ್ಲಿ ನೀರಿನ ಸಮಸ್ಯೆ: ಬೇಸಿಗೆ ಸಮೀಪಿಸುತ್ತಿದ್ದು, ಈ ಬಾರಿ ಜಿಲ್ಲೆಯ 251 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಆಯಾ ತಹಸೀಲ್ದಾರ್ ಕಚೇರಿಗಳಿಂದ ಟೆಂಡರ್ ಕರೆಯಲಾಗಿದೆ. ನೀರು ಪೂರೈಕೆಗೆ ತುರ್ತು ಕ್ರಮ ಕೈಗೊಳ್ಳುವ ಸಲುವಾಗಿ ಪ್ರತಿ ಗ್ರಾಪಂನಲ್ಲಿ 2 ಲಕ್ಷ ರೂ. ಮೀಸಲಿಡಲಾಗಿದೆ. ಬೋರ್​ವೆಲ್ ಕೊರೆಯುವ ಕಾಮಗಾರಿಯನ್ನು ಸಂಪೂರ್ಣ ಟೆಂಡರ್ ಮೂಲಕ ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಬೋರ್​ವೆಲ್ ಕಾಮಗಾರಿಯ ಶೇ. 40 ರಷ್ಟು ಹಣವನ್ನು ಈ ಬಾರಿ ಕಡ್ಡಾಯವಾಗಿ ಅದರ ಮರುಪೂರಣಕ್ಕೆ ಇಡಲಾಗುತ್ತಿದೆ ಎಂದು ಜಿಪಂ ಸಿಇಒ ಎಂ.ರೋಶನ್ ತಿಳಿಸಿದ್ದಾರೆ.

ಕಳೆದ ಬಾರಿ 400 ಕ್ಕೂ ಅಧಿಕ ಗ್ರಾಮಗಳಿಗೆ ಟ್ಯಾಂಕರ್ ನೀರು ಒದಗಿಸಲಾಗಿತ್ತು. ಹೆಚ್ಚಿನ ಗ್ರಾಮಗಳಲ್ಲಿ ಶಾಶ್ವತ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸಲಾಗಿದೆ. ಇದರಿಂದ ಟ್ಯಾಂಕರ್ ಮೂಲಕ ನೀರು ಪೂರೈಸುವ ಗ್ರಾಮಗಳ ಸಂಖ್ಯೆ ಇಳಿಮುಖವಾಗಿದೆ. ಇನ್ನೆರಡು ವರ್ಷಗಳಲ್ಲಿ ಎಲ್ಲ ಗ್ರಾಮಗಳಿಗೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂಬುದು ಜಿಪಂ ಅಧಿಕಾರಿಗಳ ವಿಶ್ವಾಸ.

ಸದ್ಯದ ಸಮೀಕ್ಷೆಯಂತೆ ಜಿಲ್ಲೆಯ ಕೆರವಾಡ, ಜನಗಾ, ನಂದಿಗದ್ದಾ, ಕಾಡಗೋಡ ಹಾಗೂ ಬಾಶಿ ಗ್ರಾಪಂಗಳಲ್ಲಿ ಅತಿ ಕಡಿಮೆ ಎಂದರೆ ಪ್ರತಿ ದಿನಕ್ಕೆ ಪ್ರತಿ ವ್ಯಕ್ತಿಗೆ 10 ಲೀಟರ್​ಗಿಂತ ಕಡಿಮೆ ನೀರು ಸಿಗುತ್ತಿದೆ. ಅಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೆ ಕ್ರಮ ವಹಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

ಜಿಯೋ ಟ್ಯಾಗಿಂಗ್ : ಪ್ರತಿ ವರ್ಷ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ವಿವರ ಪಡೆದು ಗೂಗಲ್ ಮ್ಯಾಪ್​ನಲ್ಲಿ ಅಳವಡಿಸಲಾಗಿದೆ (ಜಿಯೋ ಟ್ಯಾಗಿಂಗ್). ಈ ಮೂಲಕ ಕುಡಿಯುವ ನೀರಿನ ಮೂಲಗಳು, ಜಾರಿಯಾದ ಯೋಜನೆಗಳು, ಅಂತರ್ಜಲದ ಪ್ರಮಾಣ ಮುಂತಾದ ಸಮಗ್ರ ಮಾಹಿತಿ ಇರುವ ನಕ್ಷೆಯನ್ನು ಸಿದ್ಧ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಕುಡಿಯುವ ನೀರಿನ ಅಭಾವವನ್ನು ಯೋಜನಾಬದ್ಧವಾಗಿ ನಿಭಾಯಿಸಲು, ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗುತ್ತದೆ ಎಂಬುದು ಅಧಿಕಾರಿಗಳ ವಿವರಣೆ

ಟ್ಯಾಂಕರ್ ಮೂಲಕ ನೀರು ಪೂರೈಸುವ ಗ್ರಾಮಗಳನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಗಳಿಗೆ ಕ್ರಮ ವಹಿಸಲಾಗಿದೆ. ಬೇಕಾಬಿಟ್ಟಿ ಬೋರ್​ವೆಲ್ ಕೊರೆಯುವುದನ್ನು ನಿಷೇಧಿಸಲಾಗಿದೆ. | ಎಂ.ರೋಶನ್ ಜಿಪಂ ಸಿಇಒ