ಹಿರೇಕೆರೂರ: ಕಾಲುವೆ ನೀರು ನುಗ್ಗಿ ನೂರಾರು ಎಕರೆ ಭತ್ತ, ಮೆಕ್ಕೆಜೋಳ, ಹತ್ತಿ, ಅಡಿಕೆ ಬೆಳೆ ನಾಶವಾದ ಘಟನೆ ತಾಲೂಕಿನ ಚಿಕ್ಕೇರೂರ ಗ್ರಾಮದಲ್ಲಿ ಗುರುವಾರ ಜರುಗಿದೆ.
ಗ್ರಾಮದ ದೊಡ್ಡ ಕೆರೆಗೆ ನೀರು ಹರಿದು ಹೋಗುವ ಹಿರೇಕಾಲುವೆಯ ಏರಿಯನ್ನು ರಸ್ತೆ ಕಾಮಗಾರಿಗಾಗಿ ಕೆಆರ್ಡಿಎಲ್ ಒಡೆದು ಹಾಕಿದೆ. ಹೀಗಾಗಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿ ಫಸಲಿಗೆ ಬಂದಿದ್ದ ಭತ್ತ, ಮೆಕ್ಕೆಜೋಳ, ಹತ್ತಿ, ಅಡಕೆ, ಬಾಳೆ ಹಾನಿಯಾಗುವಂತಾಗಿದೆ.
ಕೆಆರ್ಡಿಎಲ್ನವರು ಹಿರೇಕೆರೂರಿನಿಂದ ಚಿಕ್ಕೇರೂರು ಮಾರ್ಗವಾಗಿ ರಾಣೆಬೆನ್ನೂರು ಸೇರುವ ರಾಜ್ಯ ಹೆದ್ದಾರಿ ನಿರ್ವಿುಸುತ್ತಿದೆ. ತಾಲೂಕು ಕೇಂದ್ರದಿಂದ ಗ್ರಾಮದ ಬೈಪಾಸ್ ರಸ್ತೆ ನಿರ್ವಣಕ್ಕೆ ಸಂಬಂಧಿಸಿದಂತೆ ಬೆನಕಿನ ಕೆರೆ ಹತ್ತಿರ ರಸ್ತೆಗೆ ಬ್ರಿಜ್ ನಿರ್ವಿುಸಲು ದೊಡ್ಡಕೆರೆಗೆ ಹೋಗುವ ಹಿರೇಕಾಲುವೆ ಏರಿ ಒಡೆದು ಹಾಕಲಾಗಿದೆ. ಗುರುವಾರ ಸುರಿದ ಮಳೆಯಿಂದ ನೀರು ನುಗ್ಗಿ ನೂರಾರು ಎಕರೆ ಬೆಳೆ ಹಾನಿಯಾಗಿದೆ. ತಹಸೀಲ್ದಾರರು ಪರಿಶೀಲಿಸಿ ಕಾಲುವೆ ದುರಸ್ತಿಗೊಳಿಸಬೇಕು. ಬೆಳೆ ಹಾನಿಯಾದ ರೈತರಿಗೆ ಪರಿಹಾರ ದೊರಕಿಸಬೇಕು. ಇಲ್ಲದಿದ್ದರೆ ಕಾಮಗಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕರವೇ ಗ್ರಾಮ ಘಟಕಾಧ್ಯಕ್ಷ ಭರಮಪ್ಪ ಡಮ್ಮಳ್ಳಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತರಾದ ಮಲ್ಲಿಕಾರ್ಜುನ ಬಣಕಾರ, ರಮೇಶ ಸನ್ನೇರ, ರಾಮಣ್ಣ ಚಾದಂಗಡಿ, ಕರಬಸಪ್ಪ ಬಣಕಾರ, ಪರಮೇಶಪ್ಪ ಲೆಕ್ಕಪ್ಪಳವರ, ವೆಂಕಣ್ಣ ಚೌಟಿ, ಗಿರೀಶ ಚೌಟಿ, ಶಿವಾನಂದ ಯಲ್ಲಾಪುರ, ರವಿ ಕುರಬರ, ಮಲ್ಲಪ್ಪ ಗೌಡರ, ಶೇಖಪ್ಪ ತಳವಾರ, ಮಹಾಂತೇಶ ಮಡಿವಾಳರ, ಇತರರಿದ್ದರು.