ಜಿಲ್ಲೆ

ನೀರು ತುಂಬಿಸುವ ಯೋಜನೆಗೆ ಗುದ್ದಲಿ ಪೂಜೆ

ಚಾಮರಾಜನಗರ: ನದಿ ಮೂಲಗಳಿಂದ ಕೆರೆಗಳಿಗೆ ನೀರು ತುಂಬಿಸಿ, ಅಂರ್ತಜಲ ವೃದ್ಧಿಗೊಳಿಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಕಲ್ಪಿಸುವ ಯೋಜನೆಗಳ ಜಾರಿಗೆ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ತಾಲೂಕಿನ ಹುರಳಿನಂಜನಪುರ ಗ್ರಾಮದ ಕೆರೆಯನ್ನು ಸಣ್ಣ ನೀರಾವರಿ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮದ ಸಹಯೋಗದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿ ಪಡಿಸಿ, ಪೈಪ್‌ಲೈನ್ ಮೂಲಕ ನೀರು ತುಂಬಿಸುವ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಹುಳಿನಂಜಪುರದ ಕೆರೆಯನ್ನು ಪೈಪ್‌ಲೈನ್ ಹಾಗೂ ಕಾಲುವೆ ಮೂಲಕ ಕೆರೆಯನ್ನು ತುಂಬಿಸುವ ಯೋಜನೆ ಸಿದ್ದವಾಗಿದೆ. ಈ ಹಿನ್ನೆಲೆಯಲ್ಲಿ ಕೆರೆಯನ್ನು ಅಭಿವೃದ್ದಿಸಲು ಕ್ರಿಯಾ ಯೋಜನೆ ಸಲ್ಲಿಸಿ, 2 ಕೋಟಿ ರೂ. ಬಿಡುಗಡೆಯಾಗಿದೆ. ಕೆರೆಯನ್ನು ಅಭಿವೃದ್ಧಿ ಪಡಿಸಲು ಕ್ರಮವಹಿಸಲಾಗಿದೆ ಎಂದರು.

ಹುಳಿನಂಜನಪುರ ಕೆರೆ ತುಂಬಿದರೆ, ಕಾಗಲವಾಡಿ ಕೆರೆಗೆ ನೀರು ಹರಿದು ಹೋಗುತ್ತದೆ. 600 ಎಕರೆ ಪ್ರದೇಶದಲ್ಲಿರುವ ಜಮೀನುಗಳಲ್ಲಿ ಕೃಷಿ ಪಂಪ್‌ಸೆಟ್‌ಗಳಲ್ಲಿ ಅಂತರ್ಜಲ ವೃದ್ದಿಯಾಗುತ್ತದೆ ಎಂದರು. ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಅರುಳ್‌ಕುಮಾರ್ ಮಾತನಾಡಿ, ಗ್ರಾಮದ ಕೆರೆ ತುಂಬಿಸಲು ಶಾಸಕರು ನಮ್ಮ ಮನವಿಯಂತೆ 2 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿಸಿರುವುದು ಸಂತಸದ ವಿಚಾರ. ಗ್ರಾಮಸ್ಥರು ಕೆರೆ ಒತ್ತುವರಿ ತೆರವು ಮಾಡಿ ಮತ್ತು ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡಲು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಿಗಮದ ಎಇಇ ಮಹೇಶ್, ಜೆಇ ಲೋಕೇಶ್, ಗ್ರಾ.ಪಂ ಸದಸ್ಯೆ ಕಲಾವತಿ, ಚಂದಕವಾಡಿ ಹೋಬಳಿ ಪರಿಶಿಷ್ಟ ಜಾತಿ ವಿಭಾಗದ ರೈತ ಸಂಘದ ನಿರ್ದೇಶಕ ಯು.ಆರ್.ನಾಗರಾಜು, ಗುತ್ತಿಗೆದಾರ ಭಾಸ್ಕರ್, ಮುಖಂಡರಾದ ಬಸವಣ್ಣ, ಸಿದ್ದರಾಜು, ಡಾ.ಬಿ. ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ನಾಗೇಂದ್ರ, ಸುರೇಶ್‌ಬಾಬು ಇತರರು ಇದ್ದರು.