ಹಾಸನ: ದೇವಸ್ಥಾನಕ್ಕೆ ಪೂಜೆಗೆಂದು ಆಗಮಿಸಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯ ಸ್ನಾನ ಮಾಡುವಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ತಾಲ್ಲೂಕಿನ ಗೊರೂರಿನ ಹೇಮಾವತಿ ನದಿಯ ಹಿನ್ನೀರಿನ ಖೋನಾಪುರದಲ್ಲಿ ನಡೆದಿದೆ.
ಡಾ.ಚಂದ್ರಶೇಖರ್ (31) ಮೃತಪಟ್ಟ ಯುವ ವೈದ್ಯ. ಹೊಳೆನರಸೀಪುರ ತಾಲ್ಲೂಕಿನ ಕೆರಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್, ಶನಿವಾರ ಕರ್ತವ್ಯಕ್ಕೆ ತೆರಳುವ ಮುನ್ನ ಹೇಮಾವತಿ ನದಿಯ ಹಿನ್ನೀರಿನ ಖೋನಾಪುರ ಐಲ್ಯಾಂಡ್‌ನಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಆಗಮಿಸಿದ್ದಾರೆ. ಹಲವು ವರ್ಷಗಳಿಂದಲೂ ಹೇಮಾವತಿ ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುತ್ತಿದ್ದ ಚಂದ್ರಶೇಖರ್ ಶುಕ್ರವಾರ ಕೂಡ ಪೂಜೆಗೂ ಮುನ್ನ ಹೇಮಾವತಿ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಹೇಮಾವತಿ ನದಿ ನೀರು ಸಂಪೂರ್ಣ ಕಡಿಮೆಯಾಗಿದ್ದರಿಂದ ಸ್ನಾನಕ್ಕೆ ಇಳಿದ ವೇಳೆ, ಆಳ ಅರಿಯದೆ ನೀರಿನಲ್ಲಿ ಮುಳುಗಿದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಚಂದ್ರಶೇಖರ್ ಸ್ನಾನಕ್ಕೆ ತೆರಳುವ ಮೊದಲು ಕಾರಿನಲ್ಲಿ ಮೊಬೈಲ್ ಇಟ್ಟು, ನದಿಯ ದಡದಲ್ಲಿ ಬಟ್ಟೆ ಬಿಚ್ಚಿಟ್ಟು ಸ್ನಾನಕ್ಕೆ ಇಳಿದಿದ್ದಾರೆ. ರಾತ್ರಿಯವರೆಗೂ ಮಗ ಮನೆಗೆ ಬಾರದೆ ಇದ್ದಾಗ ಪೋಷಕರು ಚಂದ್ರಶೇಖರ್‌ಗೆ ಕರೆ ಮಾಡಿದ್ದಾರೆ. ಮಗ ಫೋನ್ ಕರೆ ರಿಸೀವ್ ಮಾಡದೆ ಇದ್ದಾಗ ಗಾಬರಿಗೊಂಡ ಪೋಷಕರು ಅರಕಲಗೂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇತ್ತ ಗಸ್ತಿನಲ್ಲಿದ್ದ ಗೊರೂರು ಪೊಲೀಸರು ಒಂದೇ ಸ್ಥಳದಲ್ಲಿ ಕಾರು ನಿಂತಿದ್ದನ್ನು ಗಮನಿಸಿದ್ದರು. ಅರಕಲಗೂಡು ಪೊಲೀಸರ ಸೂಚನೆ ಮೇರೆಗೆ ಗೊರೂರು ಪೊಲೀಸರು ಹುಡಕಾಟ ನಡೆಸಿದಾಗ, ನದಿಯ ದಡದಲ್ಲಿ ಚಂದ್ರಶೇಖರ್ ಬಟ್ಟೆ ಪತ್ತೆಯಾಗಿದ್ದು ಅಣತಿ ದೂರದ ಹೇಮಾವತಿ ನದಿಯಲ್ಲಿ ಚಂದ್ರಶೇಖರ್ ಶವ ತೇಲುತ್ತಿತ್ತು. ಪೊಲೀಸರು ಶವವನ್ನು ಹೊರಗೆ ತೆಗೆದು ಮರಣೋತ್ತರ ವೈದ್ಯಕೀಯ ಪರೀಕ್ಷೆ ನಡೆಸಿ, ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ವೈದ್ಯ ಮಗನನ್ನು ಕಳೆದುಕೊಂಡ ಪೋಷಕರ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.