ಚಿಕ್ಕಬಳ್ಳಾಪುರ : ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳ ಗುರುತಿಸುವಿಕೆ ಮತ್ತು ಪರಿಹಾರ ಕ್ರಮಕ್ಕೆ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯ, ವಿವಿಧ ಇಲಾಖೆಗಳಲ್ಲಿ ಅನುದಾನ ಖರ್ಚು ಮತ್ತು ಕೆಲಸದ ಸಾಧನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಧ್ವನಿಸಿದವು.
ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆ ಆರಂಭವಾಗುತ್ತಿದ್ದಂತೆ ಗ್ರಾಮಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ಹಾಹಾಕಾರ ಪ್ರಸ್ತಾಪಿಸಿದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಂಕ್ ಮುನಿಯಪ್ಪ, ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ, ಆದರೆ, ಅವೈಜ್ಞಾನಿಕವಾಗಿ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಕೃಷ್ಣನ ಲೆಕ್ಕ ತೋರಿಸುತ್ತಿದ್ದಾರೆ ಎಂದು ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ 35 ಗ್ರಾಮಗಳನ್ನು ಗುರುತಿಸಿದ್ದು ಟ್ಯಾಂಕರ್ ಮೂಲಕ 2 ಗ್ರಾಮಗಳಿಗೆ ಮತ್ತು ಖಾಸಗಿ ಕೊಳವೆ ಬಾವಿಗಳಿಂದ 33 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. ಟಾಸ್ಕ್‌ಫೋರ್ಸ್‌ನಡಿ ಮಂಜೂರಾದ 3 ಕೋಟಿ ರೂ. ಪೈಕಿ 2.61 ಕೋಟಿ ರೂ., ವಿಶೇಷ ಅಭಿವೃದ್ಧಿ ಕಾರ್ಯಕ್ರಮದಡಿ 12.42 ಕೋಟಿ ರೂ. ಪೈಕಿ 8.31 ಕೋಟಿ ರೂ.,ಬಿಡುಗಡೆಯಾಗಿದೆ. ಬಾಕಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 736 ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಪೈಕಿ 699 ಕಾರ್ಯನಿರ್ವಹಿಸುತ್ತಿವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತ ಶಿವಕುಮಾರ್ ಲಾತೂರ್ ಸಿದ್ಧ ಉತ್ತರ ನೀಡಿ ಕೈತೊಳೆದುಕೊಂಡರು.
ಈಗಾಗಲೇ ಬೇಸಿಗೆ ಪ್ರಾರಂಭವಾಗಿದೆ. ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ದೂರುಗಳಿಗೆ ಅವಕಾಶ ನೀಡದಂತೆ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಸೂಚಿಸಿದರು.ಉಪಾಧ್ಯಕ್ಷೆ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ರಾಜಾಕಾಂತ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಕೃಷ್ಣಮೂರ್ತಿ, ಮುಖ್ಯ ಯೋಜನಾಧಿಕಾರಿ ವಿ.ಧನುರೇಣುಕಾ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
ಗ್ರಾಪಂವಾರು ಅಭಿಯಾನ ಚುರುಕು : ಕರೊನಾ ಲಸಿಕಾ ಅಭಿಯಾನವನ್ನು ಗ್ರಾಪಂವಾರು ಚುರುಕುಗೊಳಿಸಲು ಜಿಪಂ ಸಿಇಒ ಪಿ.ಶಿವಶಂಕರ್ ಸೂಚಿಸಿದರು. ಜಿಲ್ಲೆಯಲ್ಲಿ ನಿರೀಕ್ಷೆಗೆ ಅನುಗುಣವಾಗಿ ಅಭಿಯಾನ ನಡೆಯುತ್ತಿಲ್ಲ, ಚುರುಕುಗೊಳಿಸುವ ನಿಟ್ಟಿನಲ್ಲಿ ಗ್ರಾಪಂವಾರು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಪಿಡಿಒಗಳನ್ನು ಒಳಗೊಂಡ ಸಭೆ ಕರೆದು ಅಗತ್ಯ ಸಹಕಾರ ಪಡೆಯಬೇಕು. ಸ್ಥಳೀಯ ಆಡಳಿತ ಸಂಸ್ಥೆಗಳು ಲಸಿಕೆ ಕೇಂದ್ರಗಳಿಗೆ ಜನರು ಬರುವಂತಾಗಲು ವಾಹನ ವ್ಯವಸ್ಥೆ ಒದಗಿಸುವಂತೆ ನಿರ್ದೇಶಿಸಿದರು. ಜಿಲ್ಲೆಯಲ್ಲಿ 1.15 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು ಪ್ರತಿದಿನ 8 ಸಾವಿರ ಮಂದಿಗೆ ನೀಡಲು ಸೂಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್.ಕಬಾಡೆ ತಿಳಿಸಿದರು.
ಮೀನುಗಾರಿಕೆಗೆ ಹೆಚ್ಚಿನ ಪ್ರಚಾರ : ಮೀನುಗಾರಿಕೆ ಇಲಾಖೆಯ ಸವಲತ್ತುಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಮಾಹಿತಿ ಕೊರತೆ ಇದೆ ಎಂದು ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಬಂಕ್ ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಪ್ರಧಾನಿ ಮತ್ಸೃ ಸಂಪದ ಸೇರಿ ಹಲವು ಯೋಜನೆಗಳಿವೆ, ಆದರೆ, ಪ್ರತಿನಿತ್ಯ ಮೀನು ಸಾಕಣೆದಾರರು ಸವಲತ್ತು ಸಿಗದಿರುವುದರ ಬಗ್ಗೆ ದೂರು ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವ್ಯಾಪಕ ಪ್ರಚಾರದ ಮೂಲಕ ಮೀನುಗಾರಿಕೆಗೆ ಪ್ರೋತ್ಸಾಹಿಸಬೇಕು ಎಂದರು.
ರೈತರು ಕಾಲು ಎಕರೆಯಲ್ಲಿ ತಲಾ 10 ಸಾವಿರ ಲೀಟರ್ ಸಾಮರ್ಥ್ಯದ 50 ಟ್ಯಾಂಕ್‌ಗಳಲ್ಲಿ ಮೀನುಗಾರಿಕೆ ನಡೆಸಲು ಸಬ್ಸಿಡಿಯಲ್ಲಿ ಸಾಲ ನೀಡುತ್ತಿದೆ. ಇದರಡಿ ಈಗಾಗಲೇ 17 ಲಾನುಭವಿಗಳ ಆಯ್ಕೆ ಮಾಡಿದ್ದು 4 ಕೋಟಿ ರೂ., ಮಂಜೂರಾಗಿದೆ. ಇಲಾಖೆ ಕಾರ್ಯಕ್ರಮಗಳಲ್ಲಿ ನಿಗದಿತ ಗುರಿಗಿಂತಲೂ ಹೆಚ್ಚಿನ ಸಾಧನೆ ತೋರಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಟಿ.ಎನ್.ಯಶಸ್ವಿನಿ ಉತ್ತರಿಸಿದರು.