ಎನ್.ಆರ್.ಪುರ ತಾಪಂನಲ್ಲಿ ತಹಸೀಲ್ದಾರ್ ತನುಜಾ ಟಿ. ಸವದತ್ತಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಎಚ್.ಡಿ.ನವೀನ್‌ಕುಮಾರ್ ಇದ್ದರು.  
ಜಿಲ್ಲೆ

ನೀರಿನ ಸಮಸ್ಯೆ ಬಿಗಡಾಯಿಸಬಹುದು ಎಚ್ಚರ

ಎನ್.ಆರ್.ಪುರ: ಕಳೆದ ವರ್ಷ ಅಧಿಕ ಮಳೆಯಾದರೂ ಮಲೆನಾಡು ಭಾಗದಲ್ಲಿ ಅಂತರ್ಜಲ ಕಡಿಮೆಯಾಗಿದೆ. ಆದ್ದರಿಂದ ಈ ಬಾರಿ ಬೇಗನೆ ನೀರಿನ ಸಮಸ್ಯೆಗಳು ತಲೆದೋರಬಹುದಾಗಿದೆ. ತಾಲೂಕಿನಾದ್ಯಂತ ಎಲ್ಲೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಎಲ್ಲ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ತಾಪಂನಲ್ಲಿ ಬುಧವಾರ ತಹಸೀಲ್ದಾರ್ ತನುಜಾ ಟಿ. ಸವದತ್ತಿ ಅಧ್ಯಕ್ಷತೆಯಲ್ಲಿ ನಡೆದ ಕುಡಿಯುವ ನೀರಿನ ಸಮಸ್ಯೆಗಳು ಮತ್ತು ಬರ ನಿರ್ವಹಣೆ ಕುರಿತ ಸಭೆಯಲ್ಲಿ ಮಾತನಾಡಿ, ಹಿಂದಿನ ವರ್ಷಕ್ಕಿಂತ ಈ ಬಾರಿ ಸಮಸ್ಯೆ ಜಾಸ್ತಿಯೇ ಆಗಬಹುದು. ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವಂತಹ ಸ್ಥಿತಿಯೂ ನಿರ್ಮಾಣವಾಗಬಹುದು. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆಗಳನ್ನು ಈಗಿನಿಂದಲೇ ಪರಿಹರಿಸಬೇಕು ಎಂದು ತಿಳಿಸಿದರು.

ಸರ್ಕಾರಿ ಕುಡಿಯುವ ನೀರಿನ ಸ್ಥಾವರದಲ್ಲಿ ನೀರಿನ ಪ್ರಮಾಣ ಕಡಿಮೆ ಆದರೆ ಅಥವಾ ನೀರು ಬತ್ತಿಹೋದರೆ ನೀರು ಪೂರೈಸಲು ಸ್ಥಳೀಯ ಖಾಸಗಿ ಬೋರ್‌ವೆಲ್‌ಗಳ ಮಾಹಿತಿ ಈಗಿನಿಂದಲೇ ಪಡೆದುಕೊಳ್ಳಬೇಕು. ತಾತ್ಕಾಲಿಕವಾಗಿ ಖಾಸಗಿ ಬೋರ್‌ವೆಲ್‌ನಿಂದ ನೀರೊದಗಿಸಬೇಕು ಎಂದು ನಿರ್ದೇಶನ ನೀಡಿದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರೋಹಿತ್ ಮಾತನಾಡಿ, ಈ ಬಾರಿ ವಾಡಿಕೆಯಂತೆ ಮಳೆ ಬಾರದಿದ್ದರೆ ಮಾತ್ರ ತೊಂದರೆ ಆಗಲಿದೆ.ತೋಟಗಾರಿಕೆ ಬೆಳೆಗಳ ರೈತರಿಗೆ ನೀರು ಸಾಕಾಗುತ್ತಿಲ್ಲ. ಅತಿವೃಷ್ಟಿಯಡಿ ಪ್ರತಿ ಹೆಕ್ಟೇರ್‌ಗೆ 18 ಸಾವಿರ ಪರಿಹಾರ ಧನವನ್ನು ಸರ್ಕಾರದಿಂದ ನೀಡಲಾಗುತ್ತದೆ ಎಂದು ಸಭೆಗೆ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎ.ಕೆ.ಪಾಟೀಲ್ ಮಾತನಾಡಿ, ಪ್ರವಾಸಿ ಮಂದಿರ ಬಳಿಯ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ನೀರಿನ ಸಮಸ್ಯೆ ಇದೆ. ಪಪಂನಿಂದ ಪೈಪ್‌ಲೈನ್ ಮೂಲಕ ತಾತ್ಕಾಲಿಕವಾಗಿ ನೀರೊದಗಿಸಲಾಗುತ್ತಿದೆ. ಬೋರ್‌ವೆಲ್ ಅವಶ್ಯಕತೆ ಇದೆ ಎಂದು ತಿಳಿಸಿದರು.

ಬಿಸಿಎಂ ಇಲಾಖೆ ಅಧಿಕಾರಿ ರಮೇಶ್ ಮಾತನಾಡಿ, ಬಾಳೆಹೊನ್ನೂರು ಜೇಸಿ ವೃತ್ತದ ಸಮೀಪದ ಬಾಲಕಿಯರ ವಸತಿ ನಿಲಯಕ್ಕೆ ನೀರಿನ ಪ್ರಮಾಣ ಕಡಿಮೆ ಇದ್ದು, ಜೆಜೆಎಂ ಯೋಜನೆಯಡಿ ಸಂಪರ್ಕ ಮಾಡಿಕೊಟ್ಟರೆ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿಯುತ್ತದೆ ಎಂದು ತಿಳಿಸಿದರು.

ಕಡಹಿನಬೈಲು ಪಿಡಿಒ ವಿಂದ್ಯಾ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ನೀರಿನ ಸಮಸ್ಯೆ ಇದ್ದು, ಹೊಸ ಬೋರ್‌ವೆಲ್ ಕೊರೆಸಿಕೊಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ಇಒ ಎಚ್.ಡಿ.ನವೀನ್‌ಕುಮಾರ್ ಮಾತನಾಡಿ, ಮೂರೂ ವಸತಿ ನಿಲಯಗಳಿಗೆ ಟಾಸ್ಕ್ ಫೋರ್ಸ್‌ನಡಿ ಹೊಸ ಬೋರ್‌ವೆಲ್ ಕೊರೆಸಿ ಎಂದು ಕುಡಿಯುವ ನೀರಿನ ಇಂಜಿನಿಯರ್‌ಗೆ ಸೂಚಿಸಿದರು.

ಶಾಲಾ ಕಾಲೇಜುಗಳಲ್ಲಿ, ಅಂಗನವಾಡಿಗಳಲ್ಲಿ ಕುಡಿಯಲು, ಅಡುಗೆ ಮಾಡಲು, ಶೌಚಗೃಹಕ್ಕೆ ನೀರು ಅಧಿಕ ಬೇಕಾಗುತ್ತದೆ. ಸಮಸ್ಯೆಗಳಿರುವ ಶಾಲೆ, ಅಂಗನವಾಡಿಗಳ ಪಟ್ಟಿ ಕೂಡಲೇ ಸಲ್ಲಿಸಬೇಕು. ಎಲ್ಲೂ ನೀರಿನ ಸಮಸ್ಯೆ ಆಗಬಾರದು. ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಗ್ರಾಪಂಗೆ ತಿಳಿಸಿ ಬಗೆಹರಿಸಿಕೊಳ್ಳಬೇಕು. ಗ್ರಾಪಂ ಹಂತದಲ್ಲಿ ಬಗೆಹರಿಸಲು ಸಾಧ್ಯವಾಗದೆ ಇದ್ದಲ್ಲಿ ತಾಲೂಕು ಮಟ್ಟದಲ್ಲಿ ಬಗೆಹರಿಸಲಾಗುವುದು. ದೊಡ್ಡ ಮಟ್ಟದ ಸಮಸ್ಯೆ ಇದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಮಂಗನ ಕಾಯಿಲೆಯ ಸಂಶಯಾಸ್ಪದ 189 ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವುಗಳಲ್ಲಿ ಒಟ್ಟು 14 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಕರ್ಕೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಎಲ್ಲರೂ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಒಬ್ಬರು ಮಾತ್ರ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿ.ಕಣಬೂರು ಗ್ರಾಪಂ ವ್ಯಾಪ್ತಿಯಲ್ಲಿ 2, ಹಿರೇಗದ್ದೆ 1, ಕರ್ಕೇಶ್ವರ 8, ಮುತ್ತಿನಕೊಪ್ಪ 2, ಆಡುವಳ್ಳಿಯಲ್ಲಿ 1 ಪ್ರಕರಣಗಳು ಪತ್ತೆಯಾಗಿವೆ. ಈ ಹಿಂದೆ ಮಂಗನ ಕಾಯಿಲೆ ಪತ್ತೆಯಾದ ಪ್ರದೇಶ ಸೇರಿದಂತೆ ತಾಲೂಕಿನಾದ್ಯಂತದ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಿಂದ 82 ಉಣುಗುಗಳನ್ನು ಸಂಗ್ರಹಿಸಿ, ಶಿವಮೊಗ್ಗದ ಪರಮಾಣು ಕ್ರಿಮಿ ಪ್ರಯೋಗ ಶಾಲೆಗೆ ಕಳುಹಿಸಿಕೊಡಲಾಗಿದೆ. ಕೆಎಫ್‌ಡಿ ನಿಯಂತ್ರಣಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಗ್ರಾಪಂ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ರಚಿಸಲಾಗಿದೆ. ಕಾಯಿಲೆ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ರೋಗ ನಿಯಂತ್ರಣಕ್ಕೆ ಗ್ರಾಪಂಗಳ ಸಹಕಾರ ಅಗತ್ಯವಾಗಿದೆ. ಮನೆ ಮನೆಗೆ ಭೇಟಿ ನೀಡಿ ಎಚ್ಚರಿಕೆ ಕ್ರಮಗಳ ಮಾಹಿತಿ ನೀಡಲಾಗುತ್ತಿದೆ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ತಿಳಿಸಿದರು. ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಮಾತನಾಡಿ, ಮಂಗನ ಕಾಯಿಲೆ ನಿಯಂತ್ರಣಕ್ಕೆ ಗ್ರಾಪಂ ಕಸವಿಲೇವಾರಿ ವಾಹನದಲ್ಲಿ ದಿನವೂ ಪ್ರಚಾರ ಮಾಡಬೇಕು. ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಪಿಡಿಒಗಳಿಗೆ ಸೂಚಿಸಿದರು. ಶಾಲೆ, ಅಂಗನವಾಡಿಗಳಲ್ಲಿ ಮಕ್ಕಳಿಗೆ ಕುದಿಸಿ ಆರಿಸಿದ ನೀರನ್ನೇ ನೀಡುವಂತೆ ಶಿಕ್ಷಕರಿಗೆ, ಅಕ್ಷರ ದಾಸೋಹ ಸಿಬ್ಬಂದಿಗೆ ಸೂಚಿಸಬೇಕೆಂದು ಬಿಇಒ ಕೆ.ಆರ್.ಪುಷ್ಪಾ ಅವರಿಗೆ ತಿಳಿಸಿದರು.

ಗ್ರಾಪಂನಿಂದಲೇ ಕಾಮಗಾರಿಗಳನ್ನು ಕ್ರಿಯಾಯೋಜನೆಯಲ್ಲಿ ಇಟ್ಟುಕೊಂಡು ನಿರ್ವಹಿಸಿ, ನೀರಿನ ಸಮಸ್ಯೆ ಬಗೆಹರಿಸಬಹುದಾಗಿತ್ತು. ಆದರೆ ತಾಲೂಕಿನಾದ್ಯಂತ ಜೆಜೆಎಂ ಯೋಜನೆಯಡಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಕಾಮಗಾರಿಗಳನ್ನು ಮಾಡುವುದೇ ಇಲ್ಲ. ಗುತ್ತಿಗೆದಾರ ಕಾಮಗಾರಿ ನಡೆಸಲು ಆಸಕ್ತಿ ತೋರುವುದಿಲ್ಲ. ಮಾಡಿರುವ ಕಾಮಗಾರಿಗಳೆಲ್ಲ ಅರ್ಧಂಬರ್ಧವಾಗಿವೆ. ಗ್ರಾಪಂ ವ್ಯಾಪ್ತಿಯಲ್ಲಿ ಉತ್ತಮವಾಗಿದ್ದ ಕುಡಿಯುವ ನೀರಿನ ಪೈಪ್‌ಲೈನ್‌ನ್ನು ಈ ಯೋಜನೆಯಡಿ ಕಾಮಗಾರಿ ಮಾಡುವಾಗ ಹಾಳುಮಾಡಿರುವುದರಿಂದ ನೀರಿನ ಸಮಸ್ಯೆ ಆಗುತ್ತಿದೆ. ಜೆಜೆಎಂ ಯೋಜನೆ ಅಪೂರ್ಣ ಹಾಗೂ ಕಳಪೆ ಕಾಮಗಾರಿಯಿಂದಲೇ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಎಲ್ಲ ಪಿಡಿಒಗಳೂ ಸಭೆಯಲ್ಲಿ ದೂರಿದರು. ಹೊನ್ನೇಕುಡಿಗೆ ಪಿಡಿಒ ಕೆ.ಡಿ.ಜೋಸೆಫ್ ಮಾತನಾಡಿ, ಜೆಜೆಎಂ ಯೋಜನೆಯಡಿ ಗ್ರಾಪಂ ವ್ಯಾಪ್ತಿಯಲ್ಲಿ ಮಾಡಿರುವ ಪೈಪ್‌ಲೈನ್ ಕಾಮಗಾರಿಯ ಪೈಪ್‌ನ್ನು ಆಳವಾಗಿ ಅಳವಡಿಸಿಲ್ಲ. ಮುಖ್ಯರಸ್ತೆ ಬದಿ ಮಾತ್ರ ಆಳವಾಗಿ ಟ್ರಂಚ್ ತೆಗೆದು ಹಾಕಿದ್ದಾರೆ. ಊರಿನೊಳಗೆ ಹೋಗುವ ರಸ್ತೆ ಬದಿ ಮೇಲೆಯೇ ಪೈಪ್‌ಲೈನ್ ಮಾಡಿದ್ದಾರೆ. ಇದರಿಂದ ಚರಂಡಿ ತೆಗೆಯುವಾಗ ಪೈಪ್‌ಲೈನ್‌ಗೆ ಹಾನಿಯಾಗಿ ನೀರು ಸರಬರಾಜಿಗೆ ಸಮಸ್ಯೆ ಆಗುತ್ತಿದೆ ಎಂದು ದೂರಿದರು. ಇಒ ಎಚ್.ಡಿ.ನವೀನ್‌ಕುಮಾರ್ ಮಾತನಾಡಿ, ಜೆಜೆಎಂ ಕಾಮಗಾರಿ ಸಂಪೂರ್ಣವಾಗಿ ಗುಣಮಟ್ಟದಲ್ಲಾಗಿ, ಮನೆ ಮನೆಗೆ ನಳಗಳ ಮೂಲಕ ನೀರು ಸರಬರಾಜು ಆಗುತ್ತಿದೆಯೇ ಎಂದು ಪರಿಶೀಲಿಸಿದ ನಂತರವಷ್ಟೇ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿಕೊಳ್ಳಬೇಕೆಂದು ಪಿಡಿಒಗಳಿಗೆ ಸೂಚಿಸಿದರು. ಕಾಮಗಾರಿ ಸರಿಯಾಗದೆ ಇರುವ ಕಡೆ ಯಾವುದೇ ಕಾರಣಕ್ಕೂ ಗುತ್ತಿಗೆದಾರರಿಗೆ ಬಿಲ್ಲನ್ನು ನೀಡಬಾರದು. ನೀಡಿದಲ್ಲಿ ನೀವೇ ಜವಾಬ್ದಾರರು ಎಂದು ಇಂಜಿನಿಯರ್ ಅವರಿಗೆ ಎಚ್ಚರಿಕೆ ನೀಡಿದರು.