ಮೈಸೂರು: ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಗೆ ಬರುವ 49ನೇ ವಾರ್ಡ್‌ನಲ್ಲಿ ಉಂಟಾಗಿರುವ ನೀರಿನ ಸಮಸ್ಯೆಯನ್ನು ಮೇ 29ರ ಒಳಗೆ ಪರಿಹರಿಸುವಂತೆ ಶಾಸಕ ಟಿ.ಎಸ್. ಶ್ರೀವತ್ಸ ಸೂಚಿಸಿದರು.
ಅಧಿಕಾರಿಗಳು ಮತ್ತು ಪಾಲಿಕೆ ಸದಸ್ಯರೊಂದಿಗೆ ಗುರುವಾರ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ನೀರಿನ ಸಮಸ್ಯೆಯನ್ನು ಹೇಳಿಕೊಂಡರು.
ಈ ವೇಳೆ ಅಧಿಕಾರಿಗಳಿಂದ ವಿವರ ಪಡೆದುಕೊಂಡು ನಗರಕ್ಕೆ ನೀರು ವಿತರಣೆಯಾದರೂ ಸರಬರಾಜಿನಲ್ಲಿ ವ್ಯತ್ಯಯ ಆಗುತ್ತಿದೆ. ತಕ್ಷಣವೇ ಗಮನಹರಿಸಿ ಸೋಮವಾರದಿಂದ ಎಲ್ಲ ಮನೆಗಳಿಗೂ ನೀರು ತಲುಪುವಂತೆ ಮಾಡಬೇಕು ಎಂದರು.
ಕೃಷ್ಣರಾಜ ಕ್ಷೇತ್ರದಲ್ಲಿ ಯಾವುದೇ ಬಡಾವಣೆಯಲ್ಲಿ ನೀರಿನ ಪೂರೈಕೆಯಲ್ಲಿ ಸಮಸ್ಯೆ ಬರಬಾರದು. ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಿದರು. ಮೇಯರ್ ಶಿವಕುಮಾರ್, ಪಾಲಿಕೆ ಸದಸ್ಯರಾದ ಸೌಮ್ಯಾ ಉಮೇಶ್ ಇನ್ನಿತರರು ಹಾಜರಿದ್ದರು.