ಜಿಲ್ಲೆ

ನೀರಿನ ಸದ್ಬಳಕೆ ಕುರಿತು ಯೋಜನಾ ವರದಿ ನೀಡಿ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಪ್ರಮುಖವಾದ ಬೆಣ್ಣಿ ಹಳ್ಳ ಮತ್ತು ತುಪರಿ ಹಳ್ಳಗಳ ಪ್ರವಾಹ ನಿಯಂತ್ರಣ ಹಾಗೂ ಅವುಗಳ ನೀರಿನ ಬಳಕೆ ಕುರಿತು ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಧಾರವಾಡ ಜಿಲ್ಲೆಯ ಬೆಣ್ಣಿ ಹಳ್ಳ ಹಾಗೂ ತುಪರಿ ಹಳ್ಳಗಳು ಮಳೆಗಾಲದಲ್ಲಿ ಉಕ್ಕಿ ಹರಿಯುತ್ತವೆ. ಹೆಚ್ಚು ಮಳೆಯಾದಾಗ ನೆರೆ ಹಾವಳಿಯಿಂದ ನವಲಗುಂದ ತಾಲೂಕಿನ ವಿವಿಧ ಹಳ್ಳಿಗಳು ಮತ್ತು ನಾಲೆಗಳ ಪ್ರದೇಶದ ಜನರು ಸಂಕಷ್ಟಕ್ಕೊಳಗಾಗುತ್ತಾರೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ನವಲಗುಂದ ತಾಲೂಕಿನ ಯಮನೂರು ಗ್ರಾಮದ ಬಳಿ ಬೆಣ್ಣಿ ಹಳ್ಳದಿಂದ ಉಂಟಾಗುವ ಪರಿಸ್ಥಿತಿ, ಅಮರಗೋಳ ಗ್ರಾಮದ ಬಳಿಯ ನರಗುಂದ ಸೇತುವೆ, ಗೊಬ್ಬರಗುಂಪಿ, ಅಳಗವಾಡಿ, ಹೆಬ್ಬಾಳ, ಜಾವೂರ, ಹನಸಿ, ಶಿರಕೋಳ ಗ್ರಾಮಗಳ ಸುತ್ತಮುತ್ತಲಿನ ಕೃಷಿ ಭೂಮಿ ಮತ್ತು ಹಳ್ಳ, ಕೊಳ್ಳಗಳ ಬಳಿಯ ನಿವಾಸಿಗಳಿಗೆ ತೊಂದರೆಯಾಗದಂತೆ ಪ್ರವಾಹ ನಿಯಂತ್ರಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪ್ರವಾಹ ಪರಿಸ್ಥಿತಿಯಿಂದ ಹಾನಿಯಾದ ಪ್ರದೇಶದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಸಚಿವ ಜೋಶಿ ತಿಳಿಸಿದರು. ಬೆಣ್ಣಿ ಹಳ್ಳ ಹಾಗೂ ತುಪರಿ ಹಳ್ಳಗಳ ಹರಿವು, ಎಲ್ಲೆಲ್ಲಿ ನೀರು ಸಂಗ್ರಹ ಮಾಡಬಹುದು, ಪ್ರವಾಹ ಪರಿಸ್ಥಿತಿ ಹೇಗೆ ನಿಭಾಯಿಸಬಹುದು ಎಂಬುದರ ವಿವರಗಳನ್ನು ನಕ್ಷೆ ಸಮೇತ ಅಧಿಕಾರಿಗಳು ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಅರವಿಂದ ಬೆಲ್ಲದ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.