ಜಿಲ್ಲೆ

ನೀರಿನ ಮಿತ ಬಳಕೆಗೆ ಸಲಹೆ

ಚಿತ್ರದುರ್ಗ: ಅಮೂಲ್ಯ ಸಂಪತ್ತು ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಕೆ ಮಾಡಬೇಕೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಪ ಪರಿಸರಾಧಿಕಾರಿ ಪಿ.ರಾಜೇಶ್ ಹೇಳಿದರು.
ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಚ್ಛತಾ ಪಕ್ವಾಡ ಮತ್ತು ಇಕೋಕ್ಲಬ್ ಉದ್ಘಾಟನಾ ಕಾರ‌್ಯಕ್ರಮದಲ್ಲಿ ಮಾತನಾಡಿ, ನೀರನ್ನು ಪ್ರಯೋಗಾಲಯಗಳಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ. ನೀರಿನ ಮಾಲಿನ್ಯ ನಿಯಂತ್ರಿಸಿ, ಸಂರಕ್ಷಿಸುವುದು ಮುಖ್ಯವಾಗಿದೆ. ಪ್ಲಾಸ್ಟಿಕ್ ಬಳಕೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ಶಾಲೆ ನಿರ್ದೇಶಕ ಎಸ್.ಎಂ.ಪೃಥ್ವೀಶ್ ಮಾತನಾಡಿ, ಭೂಮಿ, ಜಲ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ಲಾಸ್ಟಿಕ್ ಮುಕ್ತ ಸಮಾಜಕ್ಕಾಗಿ ಎಲ್ಲರೂ ಪಣತೊಡೋಣ, ಮುಂದಿನ ಪೀಳಿಗೆಗೆ ಸಮೃದ್ಧ ಭೂಮಿಯನ್ನು ಉಳಿಸೋಣವೆಂದು ತಿಳಿಸಿದರು.
ಮುಖ್ಯಶಿಕ್ಷಕ ಎನ್.ಜಿ.ತಿಪ್ಪೇಸ್ವಾಮಿ, ಪ್ರಾಚಾರ್ಯ ಪಿ.ಬಸವರಾಜಯ್ಯ, ಉಪ ಪ್ರಾಚಾರ್ಯ ಬಿ.ಅವಿನಾಶ್ ಇದ್ದರು. ಬಿ.ವಿನ್ಮಯಿ ಮತ್ತು ರುತ್ವಿಕಾ ಪ್ರಾರ್ಥಿಸಿದರು. ಎಂ.ಖುಷಿ ಸ್ವಾಗತಿಸಿದರು. ಕನ್ನಿಕಾ ವಂದಿಸಿದರು. ವಿದ್ಯಾರ್ಥಿಗಳಿಗೆ ಇಕೋ ಕ್ಲಬ್ ಬ್ಯಾಡ್ಜ್ ವಿತರಿಸಲಾಯಿತು.