ಕಲಬುರಗಿ: ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಡಾ.ಶಿವಶರಣಪ್ಪ ಭೂಸನೂರ, ಮಹಾನಗರ ಪಾಲಿಕೆ ಆಹಾರ ಸುರಕ್ಷತಾ ಅಧಿಕಾರಿ ಪರಮೇಶ್ವರ ಮಠಪತಿ, ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಕಿರಣರಾಜ ಚಲವಾದಿ ನೇತೃತ್ವದ ತಂಡ ನಗರದಲ್ಲಿರುವ ಅನಧಿಕೃತ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಪ್ಲಾಂಟ್ಗಳ ಮೇಲೆ ದಾಳಿ ನಡೆಸಿ ಆರು ಘಟಕಗಳನ್ನು ಬಂದ್ ಮಾಡಿದೆ. ಅನಧಿಕೃತ ಘಟಕಗಳಿಗೆ ಜೆಸ್ಕಾಂ ವಿಜಲನ್ಸ್ ತಂಡದಿಂದ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. ಅಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು 2011ರಡಿ ಜಿಲ್ಲೆಯಲ್ಲಿ ಅನಧಿಕೃತ ನೀರಿನ ಘಟಕಗಳು ಹಾಗೂ ಸರಬರಾಜು ಮಾಡುತ್ತಿರುವ ವಾಹನಗಳು ಪರವಾನಗಿ ಮತ್ತು ನೋಂದಣಿ ಮಾಡಿಕೊಳ್ಳದಿದ್ದಲ್ಲಿ ಸ್ವಯಂ ಪ್ರೇರಿತರಾಗಿ ಮುಚ್ಚಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಭೂಸನೂರ ಎಚ್ಚರಿಕೆ ನೀಡಿದ್ದಾರೆ.