ಹನೂರು: ಬಡಾವಣೆಯಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ತಾಲೂಕಿನ ಬಂಡಳ್ಳಿ ಗ್ರಾಮದ ಜೆಎಸ್‌ಎಸ್ ಶಾಲೆ ಬಳಿಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಕುಟುಂಬಗಳಿದ್ದು, ಎಲ್ಲ ಬಡಾವಣೆಗಳ ತೊಂಬೆ ಹಾಗೂ ಕೊಳವೆ ನಲ್ಲಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ ನಾಲ್ಕೈದು ತಿಂಗಳಿನಿಂದ ಜೆಎಸ್‌ಎಸ್ ಶಾಲೆಗೆ ತೆರಳುವ ಮುಖ್ಯರಸ್ತೆ ಬದಿಯಲ್ಲಿನ ತೊಂಬೆ ಹಾಗೂ ನಲ್ಲಿಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಇಲ್ಲಿ ಸುಮಾರು 40 ಕುಟುಂಬಗಳಿದ್ದು, ಇತರ ಬಡಾವಣೆಗೆ ತೆರಳಿ ನೀರನ್ನು ಹೊತ್ತು ತರಬೇಕಾದ ಪರಿಸ್ಥಿತಿ ಇದೆ. ಕೂಲಿ ಕೆಲಸಕ್ಕೆ ತೆರಳುವ ಜನರು ರಾತ್ರಿ ವೇಳೆ ನಿದ್ರೆಗೆಟ್ಟು ನೀರಿಗಾಗಿ ಸಮೀಪದ ಬಡಾವಣೆಗೆ ಬಿಂದಿಗೆಯನ್ನಿಡಿದು ಅಲೆಯುವಂತಾಗಿದೆ. ಇದರಿಂದ ಬಡಾವಣೆಯಲ್ಲಿ ಕುಡಿಯುವ ನೀರಿನದ್ದೆ ಒಂದು ದೊಡ್ಡ ಸಮಸ್ಯೆಯಾಗಿದೆ.
ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಪಂ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಗಮನಹರಿಸುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗ್ರಾಪಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬಡಾವಣೆಯ ನಿವಾಸಿ ಮಹೇಶ್ ಎಚ್ಚರಿಸಿದ್ದಾರೆ. ಇತ್ತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಸದಾಶಿವ ಬೆಟ್ಟಪ್ಪ ಬಂಡಳ್ಳಿ ಫೇಸ್‌ಬುಕ್ ಖಾತೆಯಲ್ಲೂ ಪೋಸ್ಟ್ ಹಾಕಿ ಗಮನ ಸೆಳೆದಿದ್ದಾರೆ.