ಜಿಲ್ಲೆ

ನೀರಾವರಿ ಸಲಹಾ ಸಮಿತಿಸಭೆ ಕರೆಯಲು ಒತ್ತಾಯ

ಶಹಾಪುರ : ಕೆಲ ದಿನಗಳ ಹಿಂದೆ ಮಳೆ ಕೊರತೆಯಾಗಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಇದೀಗ ಸತತ ಮಳೆಯ ಕಾರಣ ಡ್ಯಾಮï‌ಗಳಲ್ಲಿ ಶೇ.೫೦ಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿದೆ. ಒಳ ಹರಿವೂ ಇದ್ದು, ಆದಷ್ಟು ಬೇಗ ನೀರಾವರಿ ಸಲಹಾ ಸಮಿತಿ ಸಭೆ ಕರೆಯುವಂತೆ ಜಲಸಂಪನ್ಮೂಲ ಸಚಿವರಿಗೆ ಮನವಿ ಮಾಡಲಾಗಿದೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.

ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ನಿರೀಕ್ಷೆಗೂ ಮೀರಿ ನೀರು ಸಂಗ್ರಹವಾಗುತ್ತಿರುವುದು ಸಮಾಧಾನ ತಂದಿದೆ. ನಗರಕ್ಕೆ ನಿರಂತರ ಕುಡಿವ ನೀರು ಸರಬರಾಜಿಗೆ ೧೨೦ ಕೋಟಿ ರೂ.ವೆಚ್ಚದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ತ್ವರಿತವಾಗಿ ಮಂಜೂರಿ ದೊರೆಯುವ ನಿರೀಕ್ಷೆ ಇದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈಗಾಗಲೇ ಭೀಮಾ ನದಿಯಿಂದ ನಗರಕ್ಕೆ ನೀರು ಸರಬರಾಜು ಮಾಡುವ ೭೦ ಕೋಟಿ ರೂ. ವೆಚ್ಚದ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ. ಆ.೧೫ರೊಳಗೆೆ ಈ ಕಾಮಗಾರಿ ಉದ್ಘಾಟನೆ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದರು.