ಬಾಗಲಕೋಟೆ: ಬಾಗಲಕೋಟೆ ಜಲ್ಲಾಡಳಿತ ಭವನದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರು ನಡೆಸುತ್ತಿರುವ ಆಯೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ ೧೦ನೇ ದಿನಕ್ಕೆ ಕಾಲಿಟ್ಟಿದೆ. ಧರಣಿಯಲ್ಲಿ ಗುರುವಾರ ಶ್ರೀಶೈಲ ಪೀಠದ ಜಗದ್ಗುರು ಡಾ.ಚೆನ್ನ ಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಪಾಲ್ಗೊಂಡು ಯೋಜನೆ ಪೂರ್ಣಗೊಳಿಸಲು ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಿದರು.
ಈ ವೇಳೆ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ನಮ್ಮ ಕರ್ನಾಟಕ ರಾಜ್ಯದ ಬಜೆಟ್‌ಗಿಂತ ಕಡಿಮೆ ಬಜೆಟ್ ಇರುವ ವಿಭಜಿತ ಆಂಧ್ರ ಸರ್ಕಾಗಳು ಬರೀ ಮೂರು ವರ್ಷದಲ್ಲಿ ಮಹತ್ವದ ಒಂದು ನೀರಾವರಿ ಯೋಜನೆಯನ್ನು ಪೂರ್ಣ ಮಾಡುತ್ತಾರೆ. ನಮ್ಮಲ್ಲಿ ಅಂತದ್ದೆ ಒಂದು ಯೋಜನೆ ೬೦ ವರ್ಷವಾದರೂ ಮುಕ್ತಾಯವಾಗಲ್ಲ ಎಂದರೆ ಅದಕ್ಕೆ ಮುಖ್ಯವಾಗಿ ಇಲ್ಲಿನ ಸರ್ಕಾರಗಳ ಇಚ್ಛಾಶಕ್ತಿ ಕೊರತೆ ಕಾರಣ. ಈ ವಿಚಾರವಾಗಿ ರಾಜ್ಯ ಸರ್ಕಾರ ಆಂಧ್ರ ಮಾದರಿಯನ್ನು ಸ್ವೀಕರಿಸಿ, ಕಾರ್ಯೋನ್ಮುಖವಾಗಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ರೈತರ ಪರವಾಗಿರುವ ಈ ಹೋರಾಟದಲ್ಲಿ ನಾನು ಪಂಚಪೀಠಗಳ ಪರವಾಗಿ ಇಲ್ಲಿಗೆ ಬಂದಿದ್ದೇನೆ. ತಮ್ಮದು ಬರೀ ಬಾಹ್ಯ ಬೆಂಬಲವೆAದು ಭಾವಿಸಬೇಡಿ. ಅಗತ್ಯತೆ ಬಂದರೆ ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ತಮ್ಮ ಪೀಠದ ಪರಂಪರೆಯನ್ನು ಸಹ ಪಕ್ಕಕ್ಕಿಟ್ಟು ರೈತರಿಗಾಗಿ ಅವರ ಹೋರಾಟದಲ್ಲಿ ಭಾಗಿ ಆಗುತ್ತೇವೆ. ಈ ಹೋರಾಟವನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕೋ ಅಲ್ಲಿಯ ತನಕ ಇದನ್ನು ಮುಂದುವರೆಸಿ ಎಂದು ಹೋರಾಟ ಸಮಿತಿ ಮುಖಂಡರಿಗೆ ಕಿವಿಮಾತು ಹೇಳಿದರು.
ರೈತ ಪರವಾದ ಈ ಹೋರಾಟಕ್ಕೆ ತಮ್ಮ ಬೆಂಬಲ ಸದಾ ಇರುತ್ತದೆ. ಅಲ್ಲದೇ ಈ ಭಾಗದಲ್ಲಿ ಸಾಕಷ್ಟು ಸಂಖ್ಯೆಯ ಶಿವಾಚಾರ್ಯರು ಇದ್ದಾರೆ. ಅವರೆಲ್ಲರದ್ದು ಈ ಹೋರಾಟಕ್ಕೆ ಬೆಂಬಲ ಇರುತ್ತದೆ. ಜೊತೆಗೆ ಭಾಗವಹಿಸುತ್ತಾರೆ. ಶಿವಾಚಾರ್ಯರ ಜೊತೆಗೆ ತಾವು ಬರಬೇಕು ಎಂದು ತಾವುಗಳು ಯಾವಾಗೆಲ್ಲ ಅಪೇಕ್ಷೆ ಪಡುತ್ತಿರೋ ಆವಾಗ ಜಗದ್ಗುರುಗಳು ಇಲ್ಲಿಗೆ ಬರುತ್ತಾರೆ ಎಂದು ಭರವಸೆ ನೀಡಿದರು.
ಮುಗಿಯಬೇಕಿದ್ದ ಯೋಜನೆ ಇನ್ನೂ ಅರಂಭವೇ ಆಗಿಲ್ಲ :
ಅಂದುಕೊAಡAತೆ ಆಗಿದ್ದರೆ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ ಕಳೆದ ೧೪ ವರ್ಷಗಳ ಹಿಂದೆ ಆರಂಭವಾಗಿ ಮರ‍್ನಾಲ್ಕು ವರ್ಷಗಳಲ್ಲಿ ಮುಕ್ತಾಯವಾಗಬೇಕಿತ್ತು. ಆದರೆ, ಯೋಜನೆ ಇನ್ನೂ ಶುರುವಾಗಿಲ್ಲ ಎನ್ನುವುದು ದೊಡ್ಡ ದುಸ್ಥಿತಿ. ರೈತರ ಕಣ್ಣೀರು ಒರೆಸಲು ಸರ್ಕಾರ ಮುಂದಾಗಬೇಕು. ಯೋಜನಾ ಸಂತ್ರಸ್ತರು ತಮ್ಮ ಮನೆ, ಹೊಲ ಮಾತ್ರವಲ್ಲದೇ ಊರನ್ನು ಕಳೆದುಕೊಂಡಿದ್ದಾರೆ. ಕೆಲವರಿಗೆ ಪರಿಹಾರ ಬಂದಿದೆ. ಕೆಲವರಿಗೆ ಬಂದಿಲ್ಲ. ಅವರದ್ದು ಅತಂತ್ರ ಸ್ಥಿತಿ ಇನ್ನೂ ಜೀವಂತವಾಗಿದೆ. ರೈತರ ಗೋಳು ದೇವರಿಗೆ ಗೊತ್ತು. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದರೆ ಎರಡ್ಮೂರು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿ ಎಂದು ಸರ್ಕಾರಕ್ಕೆ ಆಗ್ರಹಿಸುವುದಾಗಿ ಶ್ರೀಶೈಲ ಜಗದ್ಗುರುಗಳು ತಿಳಿಸಿದರು.