ಜಿಲ್ಲೆ

ನೀರಾವರಿ ಯೋಜನೆ ಶೀಘ್ರ ಪೂರ್ಣ

ಸಂಬರಗಿ: ಗಡಿಭಾಗದ ಖಿಳೇಗಾಂವ ಬಸವೇಶ್ವರ ಏತ ನೀರಾವರಿಯ ೨ನೇ ಹಂತದ ಯೋಜನೆ ಹಾಗೂ ಸುಮಾರು ೧೫೦೦ ಕೋಟಿ ರೂ. ವೆಚ್ಚದಲ್ಲಿ ಕೊಟ್ಟಲಗಿ-ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಬರಪೀಡಿತ ಗ್ರಾಮಗಳಲ್ಲಿ ಹಸಿರು ಕ್ರಾಂತಿ ಮಾಡಿಯೇ ತೀರುತ್ತೇವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಸಮೀಪದ ಗುಂಡೇವಾಡಿ ಗ್ರಾಮದಲ್ಲಿ ಕೃಷ್ಣಾ ನದಿಯಿಂದ ೧೩೮.೮೧ ಕೋಟಿ ರೂ. ವೆಚ್ಚದಲ್ಲಿ ಗಡಿಭಾಗದ ೧೧ ಕೆರೆ ತುಂಬುವ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರೆವೇರಿಸಿ ಮಾತನಾಡಿದರು. ಚುನಾವಣೆಯಲ್ಲಿ ನೀಡಿದ ನೀರಾವರಿ ಯೋಜನೆಗಳನ್ನು ಹಂತ-ಹಂತವಾಗಿ ಪೂರ್ಣಗೊಳಿಸುತ್ತಿದ್ದೇವೆ. ನಾವು ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವುದಿಲ್ಲ ಎಂದರು.

ಯೋಜನೆ ಮೂಲಕ ಪಾರ್ಥನಳ್ಳಿ, ಗುಂಡೇವಾಡಿ ಹಾಗೂ ಅನಂತಪುರ ಗ್ರಾಮದ ತಲಾ ಎರಡು ಕೆರೆ ಹಾಗೂ ಬೇಡರಹಟ್ಟಿ, ಚಮಕೇರಿ, ಬೆವನೂರ, ಬಳ್ಳಿಗೇರಿ, ಮಲಾಬಾದ ಗ್ರಾಮದ ೧ ಕೆರೆಗೆ ಕೃಷ್ಣಾ ನದಿಯಿಂದ ಪೈಪ್‌ಲೈನ್ ಮೂಲಕ ನೀರು ತುಂಬಿಸಲಾಗುವುದು ಎಂದರು.

ಶಾಸಕ ರಾಜು ಕಾಗೆ ಮಾತನಾಡಿದರು. ಕೃಷ್ಣಾ ಸಹಕಾರಿ ಸಂಘದ ಅಧ್ಯಕ್ಷ ಪರಪ್ಪ ಸವದಿ, ಶಂಕರ ವಾಘಮೋಡೆ, ನಿಜಗುಣಿ ಮಗದುಮ್ಮ, ಸಿದರಾಯ ತೇಲಿ, ಜಿಪಂ ಮಾಜಿ ಸದಸ್ಯ ವಿನಾಯಕ ಬಾಗಡಿ, ಮಹಾದೇವ ಗುಂಜಿಗಾವಿ, ಗೂಳಪ್ಪ ಜತ್ತಿ, ಜಯಶ್ರೀ ಯಳ್ಳೂರ, ಶಿವಾನಂದ ಗೊಲಬಾವಿ, ಬಸವರಾಜ ಅಂಗಡಿ, ಚೂನಪ್ಪ ಪೂಜಾರಿ, ಚಂದ್ರಕಾಂತ ಇಮ್ಮಡಿ, ಕೆ.ಆರ್. ಪಾಟೀಲ, ಡಾ. ಚನ್ನಪ್ಪ ಸಂಕ್ರಟ್ಟಿ, ಪುಂಡಲೀಕ ಜಾಧವ, ಕಾಗವಾಡ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ರೇಖಾ ಪುಂಜಪ್ಪಗೋಳ, ಅನಂತಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಓಂಪ್ರಕಾಶ ಪಾಟೀಲ, ಶಿವಾನಂದ ಗುಡ್ಡಾಪುರ, ಪ್ರವೀಣ ಹುಣಶೀಕಟ್ಟಿ, ಗುತ್ತಿಗೆದಾರರಾದ ಜೆ.ಎನ್. ಶೆಟ್ಟಿ, ಹಾಗೂ ಅಶೋಕ ಕಪ್ಪಲಗುದ್ದಿ ಇತರರಿದ್ದರು.