ಕಲಬುರಗಿ: ಹಿಂದುಳಿದ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಕಳೆದ ನಾಲ್ಕೆÊದು ದಶಕದಿಂದ ಹಲವು ನೀರಾವರಿ ಯೋಜನೆಗಳು ಜಾರಿಯಾಗಿದ್ದು, ಇದುವರೆಗೆ ಕನಿಷ್ಠ ಒಂದು ಯೋಜನೆಯೂ ಪೂರ್ಣಗೊಂಡಿಲ್ಲ. ಆದ್ದರಿಂದ ಪ್ರಸ್ತುತ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡುವ ಬಗ್ಗೆ ಚರ್ಚಿಸಿ, ಕ್ರಮ ವಹಿಸಲಿ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ್ ಆಗ್ರಹಿಸಿದರು.
ಕೃಷ್ಣಾ ನದಿಯ ಉಪ ನದಿ ಭೀಮಾ, ಅದರ ಉಪ ನದಿಗಳಾದ ಬೋರಿಹಳ್ಳ, ಅಮರ್ಜಾ, ಗಂಡೋರಿ ನಾಲಾ, ಮುಲ್ಲಾಮಾರಿ, ಕಾಗಿಣಾ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ, ಬ್ಯಾರೇಜ್ ಕಂ ಬ್ರಿಜ್‌ಗಳು, ಕೆರೆಗಳ ನೀರು ಸಮರ್ಪಕವಾಗಿ ಬಳಸಿದರೆ ೪.೫ ಲಕ್ಷ ಎಕರೆ ರೈತರ ಭೂಮಿಗೆ ನೀರು ಒದಗಿಸಬಹುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
೧೯೭೨ರಲ್ಲಿ ಭೀಕರ ಬರ ಸೃಷ್ಟಿಯಾಗಿದ್ದಾಗ ಭಾರತ ನೀರಾವರಿ ಆಯೋಗ ತನ್ನ ವರದಿಯಲ್ಲಿ ಜಿಲ್ಲೆಯ ಯಾವ ತಾಲೂಕುಗಳಲ್ಲಿ ನೀರಾವರಿ ಮಾಡಬಹುದು ಎಂದು ವರದಿ ನೀಡಿತ್ತು. ನ್ಯಾ.ಆರ್.ಎಸ್.ಬಚಾವತ್ ಆಯೋಗ ರೈತರ ಬದುಕು ಬದಲಾಯಿಸುವ ಜಿಲ್ಲೆಯ ಒಂಬತ್ತು ನೀರಾವರಿ ಯೋಜನೆಗೆ ಅನುಮತಿ ನೀಡಿತ್ತು. ಆದರೆ ಇದುವರೆಗೆ ಒಂದು ಯೋಜನೆಯೂ ಪೂರ್ಣಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಭೀಮಾ ಏತ ನೀರಾವರಿ ಯೋಜನೆ, ಅಮರ್ಜಾ ನೀರಾವರಿ ಯೋಜನೆ, ಗಂಡೋರಿನಾಲಾ ನೀರಾವರಿ ಯೋಜನೆ, ಬೆಣ್ಣೆತೋರಾ ನೀರಾವರಿ ಯೋಜನೆ, ಮುಲ್ಲಾಮಾರಿ ಮೇಲ್ದಂಡೆ ನೀರಾವರಿ ಯೋಜನೆ, ಮುಲ್ಲಾಮಾರಿ ಕೇಳದಂಡೆ ನೀರಾವರಿ ಯೋಜನೆ, ಚಂದ್ರAಪಳ್ಳಿ ನೀರಾವರಿ ಯೋಜನೆ, ಮಲ್ಲಾಬಾದ್ ಏತ ನೀರಾವರಿ ಯೋಜನೆ, ಸನ್ನತಿ ನೀರಾವರಿ ಯೋಜನೆಗಳ ಪ್ರಕಾರ ಆಣೆಕಟ್ಟುಗಳನ್ನು ಕಟ್ಟಲಾಗಿದೆ. ಕೆಲವೆಡೆ ಕಾಲುವೆ ನಿರ್ಮಿಸಲಾಗಿದೆ. ಆದರೆ ಒಂದು ಹನಿ ನೀರು ಹರಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಎಲ್ಲ ಯೋಜನೆಗಳಿಗೆ ನಾಲ್ಕು ಸಾವಿರ ಕೋಟಿಗಿಂತಲೂ ಹೆಚ್ಚು ಹಣ ಖರ್ಚು ಮಾಡಿದ್ದರೂ ಯೋಜನೆಗಳು ಸಂಪೂರ್ಣ ವಿಫಲವಾಗಿವೆ. ಈ ಭಾಗದ ಜನಪ್ರತಿನಿಧಿಗಳು, ಎಲ್ಲ ಜನಪ್ರತಿನಿಧಿಗಳು, ಆಡಳಿತದಲ್ಲಿ ಇರುವವರು ತಮ್ಮ ಜವಾಬ್ದಾರಿ ಸರಿಯಾಗಿ ನಿರ್ವಹಿಸಿದರೆ ಜಿಲ್ಲೆಯೂ ಮೂರ್ನಾಲ್ಕು ದಶಕಗಳ ಹಿಂದೆಯೇ ಪೂರ್ಣವಾಗಿ ನೀರಾವರಿಗೆ ಒಳಪಡುತ್ತಿತ್ತು. ಆದರೆ ಆಡಳಿತದಲ್ಲಿರುವವರ ನಿರ್ಲಕ್ಷÈದಿಂದ ಸಮಸ್ಯೆ ಶಾಶ್ವತವಾಗಿಯೇ ಉಳಿದಿದೆ ಎಂದು ಆರೋಪಿಸಿದರು.
ಪ್ರಮುಖರಾದ ಮಲ್ಲಿಕಾರ್ಜುನ ಗೌರ, ಶಂಕರಗೌಡ ಪಾಟೀಲ್, ರಾಜಕುಮಾರ ಉಕ್ಕಲಿ, ಶ್ರೀಕಾಂತ ದಿವಾಣಜಿ, ಶ್ರೀಶೈಲಗೌಡ ಪಾಟೀಲ್ ಇತರರಿದ್ದರು.