ಕಾಗವಾಡ: ನಿಗದಿತ ಸಮಯದಂತೆ ಜೂನ್ ತಿಂಗಳಿನಲ್ಲಿ ಖಿಳೇಗಾವ ಬಸವೇಶ್ವರ ಏತ ನೀರಾವರಿ ಯೋಜನೆಯ ನೀರನ್ನು ರೈತರ ಜಮೀನುಗಳಿಗೆ ಹರಿಸುವ ಗುರಿ ಹೊಂದಲಾಗಿದ್ದು, ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ ಎಂದು ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ ಹೇಳಿದರು. ಕೆಂಪವಾಡದ ತಮ್ಮ ಕಾರ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ನೀರಾವರಿ ಇಲಾಖೆಯ ಮುಖ್ಯ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಬಸವೇಶ್ವರ ಏತ ನೀರಾವರಿ ಯೋಜನೆಗೆ ವೇಗ ನೀಡಲು ಪ್ರಗತಿ ಪರಿಶೀಲನೆ ಸಭೆ ಆಯೋಜಿಸಲಾಗುತ್ತಿದೆ. ಇಲ್ಲಿಯವರೆಗೆ ಆಗಿರುವ ಕಾಮಗಾರಿ ಹಾಗೂ ಮುಂದೆ ಕೈಗೊಳ್ಳಬೇಕಾಗಿರುವ ಕಾಮಗಾರಿ ಮತ್ತು ಅಡೆತಡೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದು ಹೇಳಿದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಕೆ. ರವಿ ಮಾತನಾಡಿ, ನೀರಾವರಿ ಕಾಮಗಾರಿ ಭರದಿಂದ ಸಾಗಿದ್ದು, ನಿಗದಿತ ಸಮಯದಲ್ಲಿ ನೀರು ಹರಿಸಲು ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ಶೇ. 75 ಕಾಮಗಾರಿ ಮುಗಿದಿದ್ದು, ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಪ್ರವೀಣ ಹುಣಶೀಕಟ್ಟಿ, ಸಹಾಯಕ ಅಭಿಯಂತರಾದ ಬಸವರಾಜ ಗಲಗಲಿ, ಪ್ರಶಾಂತ ಪೋತದಾರ, ಗುತ್ತಿಗೆದಾರ ಉದಯ ಪೂಜಾರಿ ಇದ್ದರು.