ಅರಸೀಕೆರೆ: ನೀರಿನ ಮಿತಬಳಕೆ ಹಾಗೂ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ತಾಲೂಕು ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ ಹಾಗೂ ಅಟಲ್ ಭೂ ಜಲ ಯೋಜನೆ ಸಮುದಾಯ ಸಹಭಾಗಿತ್ವದಲ್ಲಿ ಸುಸ್ಥಿರ ಅಂತರ್ಜಲ ನಿರ್ವಹಣೆ ಕುರಿತು ಸೋಮವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಮಳೆಗಾಲದಲ್ಲಿ ನೀರನ್ನು ಸಂರಕ್ಷಿಸಿ ಮರುಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆಸಕ್ತಿ ವಹಿಸಿವೆ. ಆದರೆ, ಯೋಜನೆಯ ಅನುಷ್ಠಾನಕ್ಕೆ ಸಮರ್ಪಕವಾಗಿ ಅನುದಾನ ಬಿಡುಗಡೆ ಆಗಿಲ್ಲ. ಈ ನಿಟ್ಟಿನಲ್ಲಿ ಉಭಯ ಸರ್ಕಾರಗಳು ಗಂಭೀರ ಚಿಂತನೆ ನಡೆಸಬೇಕಿದೆ ಎಂದರು.
ಅರಸೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದ್ದು ಅಪಾರ ಜಲರಾಶಿ ಸಂಗ್ರಹಗೊಳ್ಳುವ ಜತೆಗೆ ಅಂತರ್ಜಲವೂ ವೃದ್ಧಿಯಾಗಿದೆ. ಇದರಿಂದಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಮರುಬಳಕೆಯಾಗುತ್ತಿದೆ ಎಂದು ಸಂತಸವ್ಯಕ್ತಪಡಿಸಿದರು.
ಅಂತರ್ಜಲ ಸಂರಕ್ಷಣೆ, ಮಳೆ ನೀರು ಮರುಬಳಕೆ ಕುರಿತು ತಾಲೂಕಿನಲ್ಲಿ ಜನಜಾಗೃತಿ ಮೂಡಿಸಲು ಹೊರಟಿರುವ ಕಲಾವಿದರ ತಂಡ ತಮ್ಮ ಸೇವಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿ ಎಂದು ಆಶಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗರಾಜ್, ಸಣ್ಣ ನೀರಾವರಿ ಇಲಾಖೆಯ ಎಇಇ ಸುಂದರರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮನಕತ್ತೂರು ಗಿರಿಯಪ್ಪ, ಅಮ್ಮನಹಟ್ಟಿ ಅಜಯ್ ಸೇರಿ ಹಲವರು ಪಾಲ್ಗೊಂಡಿದ್ದರು. ಕಲಾವಿದರು ಹಲವು ಜಾಗೃತಿ ಗೀತೆಗಳನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು.