ಚಿತ್ರದುರ್ಗ: ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಉದ್ದೇಶದಿಂದ ಚುನಾವಣೆಗೆ ಸಂಬಂಧಿಸಿದ ಅತೀ ಸೂಕ್ಷ್ಮವಿಷಯಗಳೂ ಒಳಗೊಂಡಂತೆ ಪ್ರತಿ ಅಂಶಗಳನ್ನು ಜಾಗರೂಕತೆಯಿಂದ ಗಮನಿಸಲಾಗುತ್ತಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಮನೋಹರ ಮರಂಡಿ ಹೇಳಿದರು.
ನೀತಿ ಸಂಹಿತೆ ಹಾಗೂ ಚುನಾವಣೆ ವೆಚ್ಚದ ಕುರಿತು ಡಿಸಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭ್ಯರ್ಥಿಗಳು ಹಾಗೂ ಏಜೆಂಟರ್‌ಗಳೊಂದಿಗಿನ ಸಭೆಯಲ್ಲಿ ಮಾತನಾಡಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಗಂಭೀರ ಪ್ರಕರಣವಾಗಲಿದ್ದು, ಕ್ರಮ ಖಚಿತ ಎಂದು ಎಚ್ಚರಿಸಿದರು.
ವೆಚ್ಚಗಳಿಗೆ ಸಂಬಂಧಿಸಿದ ನಿರ್ದೇಶನಗಳನ್ನು ತಪ್ಪದೆ ಪಾಲಿಸಬೇಕು. ಮತದಾನ ಪ್ರಕ್ರಿಯೆ ಸಮರ್ಥ ನಿರ್ವಹಣೆ ನಿಟ್ಟಿನಲ್ಲಿ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಅಧಿಕಾರಿಗಳ ಪ್ರತಿ ನಡೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿ 24 ಗಂಟೆ ಕಂಟ್ರೋಲ್ ರೂಂ. ಕಾರ‌್ಯನಿರ್ವಹಿಸುತ್ತಿದೆ. ವೆಚ್ಚದ ದೃಷ್ಟಿಯಿಂದ ರಾಜಕೀಯ ಮುಖಂಡರು ಹಾಗೂ ಸ್ಟಾರ್ ಪ್ರಚಾರಕರ ಮೇಲೂ ಗಮನ ಇರಿಸಲಾಗಿದೆ. ಸಿ-ವಿಜಿಲ್ ಮೂಲಕ ನೀತಿ ಸಂಹಿತೆ ಉಲಂಘನೆ ದೂರು ಸಲ್ಲಿಸಬಹುದಾಗಿದೆ ಎಂದರು.
ವೆಚ್ಚ ವೀಕ್ಷಕಿ ಪ್ರಜಕ್ತಾ ಠಾಕೂರ್ ಮಾತನಾಡಿ, ಅಭ್ಯರ್ಥಿಗಳು ತಪ್ಪದೆ ನಿತ್ಯ ವೆಚ್ಚದ ಲೆಕ್ಕ ಇಡಬೇಕು. ನಾಮಪತ್ರ ಸಲ್ಲಿಸಿದ ದಿನದಿಂದಲೇ ವೆಚ್ಚದ ವಹಿಗಳನ್ನು ನಿರ್ವಹಿಸಬೇಕು. ಈ ವಹಿಗಳನ್ನು ಮೂರು ಬಾರಿ ನಿಗದಿ ಪಡಿಸಿದ ದಿನಾಂಕಗಳಂದು ಪರಿಶೀಲಿಸಲಾಗುವುದು ಎಂದು ಹೇಳಿದರು.
ಪ್ರತಿ ವಿಧಾನಸಭಾ ಕ್ಷೇತ್ರವಾರು ಸಹಾಯಕ ಚುನಾವಣೆ ಅಧಿಕಾರಿಗಳ ನೇತೃತ್ವದಲ್ಲಿ ಚುನಾವಣೆ ವೆಚ್ಚದ ಶ್ಯಾಡೋ ರಿಜಿಸ್ಟರ್ ವಹಿ ದಾಖಲಿಸಲಾಗುತ್ತದೆ. ಪರಿಶೀಲನೆ ವೇಳೆ ಅಭ್ಯರ್ಥಿಗಳ ಚುನಾವಣೆ ವೆಚ್ಚದ ವಹಿಗಳನ್ನು ಇದರೊಂದಿಗೆ ತಾಳೆ ನೋಡಲಾಗುತ್ತದೆ. ಆಯೋಗದ ನಿರ್ದೇಶನಗಳಿಗೆ ಬದ್ಧರಾಗಿರಬೇಕು. ಪ್ರಚಾರಕ್ಕಾಗಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು ಅದರಿಂದಲೇ ಪ್ರಚಾರದ ವೆಚ್ಚಗಳನ್ನು ಭರಿಸಬೇಕು ಎಂದರು.
ಬಿಳಿ ಹಾಗೂ ತಿಳಿಗುಲಾಬಿ ಬಣ್ಣದ ವಹಿಯಲ್ಲಿ ವೆಚ್ಚದ ವಿವರವನ್ನು ದಾಖಲಿಸಬೇಕು. ಹಳದಿ ವಹಿಯಲ್ಲಿ ಬ್ಯಾಂಕ್ ವಹಿವಾಟಿರಬೇಕು. ಉಚಿತ ಕೊಡುಗೆ, ಹಣ, ಹೆಂಡ ಹಂಚಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಸಹಾಯಕ ಚುನಾವಣಾ ಅಧಿಕಾರಿಗಳು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಸುವ ಪ್ರಚಾರದ ವೆಚ್ಚಗಳನ್ನು ಶ್ಯಾಡೋ ರಿಜಿಸ್ಟರ್‌ನಲ್ಲಿ ತಪ್ಪದೆ ನಮೂದಿಸಬೇಕು. ಕಾಲ, ಕಾಲಕ್ಕೆ ವಹಿಗಳನ್ನು ಪರಿಶೀಲಿಸಲಾಗುವುದೆಂದು ಠಾಕೂರ್ ಹೇಳಿದರು.
ಪ್ರಚಾರದ ಅನುಮತಿಗಾಗಿ ಸುವಿಧಾ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳು ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ದೇವಾಲಯ, ಚರ್ಚ್, ಮಸೀದಿ, ಮಠ ಸೇರಿ ಯಾವುದೇ ಧಾರ್ಮಿಕ ಕೇಂದ್ರಗಳು ಹಾಗೂ ಸರ್ಕಾರಿ ಭವನಗಳನ್ನು ಪ್ರಚಾರಕ್ಕೆ ಬಳಸದಂತೆ ಅಭ್ಯರ್ಥಿಗಳಿಗೆ ವೆಂಕಟೇಶ್ ಸಲಹೆ ನೀಡಿದರು.
*ಮನೆಯಿಂದಲೇ ಮತದಾನಕ್ಕೆ ಅವಕಾಶ: ಅಂಗವಿಕಲರು ಹಾಗೂ 80 ವರ್ಷ ವಯಸ್ಸು ಮೀರಿದ ಹಿರಿಯರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲೆಯಲ್ಲಿ ಮನೆಯಿಂದಲೇ ಮತದಾನ ಏ.13ರಿಂದ 15ರ ವರೆಗೆ ನಡೆಯಲಿದೆ ಎಂದು ವೆಂಟಕೇಶ್ ಹೇಳಿದರು.
ಜಿಲ್ಲೆಯಲ್ಲಿ 29 ಸಾವಿರಕ್ಕೂ ಅಧಿಕ ಅಂಗವಿಕಲ ಮತದಾರರು ಹಾಗೂ 80 ವರ್ಷ ವಯಸ್ಸು ಮೀರಿದ 16 ಸಾವಿರ ಹಿರಿಯ ನಾಗರಿಕರನ್ನು ಗುರುತಿಸಲಾಗಿದೆ. ಇವರ ಪೈಕಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಸೇರಿ ಜಿಲ್ಲೆಯಲ್ಲಿ ಅಂದಾಜು 4 ಸಾವಿರ ಮತದಾರರು ಮಂದಿ ಮನೆಯಿಂದ ಮತದಾನಕ್ಕೆ ನೋಂದಾಯಿಸಿದ್ದಾರೆ ಎಂದರು.
ಪಿಆರ್‌ಒ, ಎಪಿಆರ್‌ಒ, ಮೈಕ್ರೋ ವೀಕ್ಷಕರು ಹಾಗೂ ಪೊಲೀಸ್‌ರಿರುವ ತಂಡ ಮನೆ ಈ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಲಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಅಂಚೆ ಮತದಾನ ಕೇಂದ್ರ ಸ್ಥಾಪಿಸಲಾಗಿದೆ. ಏ.19ರಿಂದ 21ರ ವರೆಗೆ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಮತ ಚಲಾಯಿಸಲು ಅವಕಾಶವಿದೆ ಎಂದು ಹೇಳಿದರು.
ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಮುಖ್ಯಲೆಕ್ಕಾಧಿಕಾರಿ ಡಿ.ಆರ್.ಮಧು, ಎಡಿಸಿ ಬಿ.ಟಿ.ಕುಮಾರಸ್ವಾಮಿ ಮತ್ತಿತರರು ಇದ್ದರು.