ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಿಯಮಗಳ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಭಾನುವಾರ ಮಾಸ್ಟರ್ ಟ್ರೈನರ್‌ಗಳ ತರಬೇತಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ನೀತಿ ಸಂಹಿತೆ ಉಲ್ಲಂಘನೆಯಾಗಬಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಈಗಾಗಲೇ ಗ್ರಾಪಂ ಚುನಾವಣೆಗೆ ಅಗತ್ಯವಿರುವ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿಶೇಷ ತರಬೇತಿಯ ಮೂಲಕ ಮಾರ್ಗದರ್ಶನ ನೀಡಿ, ಗೊಂದಲ ಬಗೆಹರಿಸಲಾಗಿದ್ದು, ನಿಷ್ಪಕ್ಷಪಾತ, ಶಾಂತಿಯುತ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಶ್ರಮಿಸಬೇಕು ಎಂದರು.
ಕರೊನಾ ಸೋಂಕಿನ ಆತಂಕದ ನಡುವೆ ಚುನಾವಣೆ ನಡೆಯುತ್ತಿದೆ. ಈ ಸವಾಲನ್ನು ಸಮರ್ಥವಾಗಿ ಎದುರಿಸಿ, ಯಶಸ್ವಿಯಾಗಬೇಕಾಗಿದ್ದು, ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ಪ್ರತಿ ಮತಗಟ್ಟೆಯಲ್ಲೂ ಚುನಾವಣಾ ಆಯೋಗ ನೀಡಿರುವ ಎಸ್‌ಒಪಿ ಮಾರ್ಗಸೂಚಿಗಳ ಕಡ್ಡಾಯ ಪಾಲನೆಯಾಗಬೇಕು. ವಿದ್ಯುತ್, ಕುಡಿಯುವ ನೀರು, ಶೌಚಗೃಹ ಸೇರಿ ಅಗತ್ಯ ಮೂಲಸೌಕರ್ಯಗಳು ಸಮರ್ಪಕವಾಗಿ ಇವೆಯೇ ಎಂಬುದನ್ನು ಪರಿಶೀಲಿಸಿ ಖಾತರಿ ಪಡಿಸಿಕೊಳ್ಳಬೇಕು. ಮತದಾನದ ವೇಳೆ ಯಾವುದೇ ದೂರುಗಳು ಕೇಳಿ ಬರಬಾರದು ಎಂದು ಎಚ್ಚರಿಸಿದರು.
ಚುನಾವಣಾ ಸುಗಮ ಪ್ರಕ್ರಿಯೆ, ಅಗತ್ಯ ಸಿದ್ಧತೆ, ಕಾರ್ಯ ನಿರ್ವಹಣೆಯ ಜವಾಬ್ದಾರಿ ವಿಚಾರಗಳ ಕುರಿತು ಮುಖ್ಯ ತರಬೇತುದಾರ ಶಂಕರ್‌ರೆಡ್ಡಿ ತಿಳಿಸಿದರು.