ಬೆಂಗಳೂರು: ನೀಟ್ ಪರೀಕ್ಷೆಗೆ ಎದುರಿಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ತರಬೇತಿ ಕೇಂದ್ರ ಆರಂಭಿಸಲು ನೆರವು ನೀಡಲಾಗುವುದು ಎಂದು ಸಚಿವ ಎಂಟಿಬಿ ನಾಗರಾಜ್ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ಭಾನುವಾರ ಕಾಳಿದಾಸ ಹೆಲ್ತ್ ಆ್ಯಂಡ್ ಎಜುಕೇಷನ್ ಟ್ರಸ್ಟ್ ಆಯೋಜಿಸಿದ್ದ ಕುರುಬ ಸಮಾಜದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಅನೇಕ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದರೂ ಆರ್ಥಿಕ ತೊಂದರೆಯಿಂದ ಉನ್ನತ ಶಿಕ್ಷಣ ಪಡೆಯಲಾಗುತ್ತಿಲ್ಲ. ಹಾಗಾಗಿ, ಎಂಟಿಬಿ ಅನಂತ ಉನ್ನತಿ ಎಜುಕೇಷನ್ ಟ್ರಸ್ಟ್‌ನಿಂದ ಈ ಬಾರಿ 24 ವಿದ್ಯಾರ್ಥಿಗಳಿಗೆ ತಲಾ 60 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ತಲಾ 50 ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.
ಕುರುಬ ಸಮಾಜದ ಹೆಚ್ಚು ಮಂದಿ ವೈದ್ಯಕೀಯ ಶಿಕ್ಷಣ ಪಡೆಯುವಂತಾಗಬೇಕು.ಅದಕ್ಕಾಗಿ ನೀಟ್ ಪರೀಕ್ಷೆಗಾಗಿ ತರಬೇತಿ ಕೇಂದ್ರ ಆರಂಭಿಸಬೇಕು.ಅದಕ್ಕೆ ಅಗತ್ಯವಾದ ನೆರವು ನೀಡುವೆ ಎಂದರು.
ಜೀವನದಲ್ಲಿ ಗುರಿ ಇರಬೇಕು. ಜತೆಗೆ, ಅದೃಷ್ಟವೂ ಜತೆಗೂಡಿದರೆ ಅದ್ಬುತವಾದದ್ದನ್ನು ಸಾಧಿಸಬಹುದು ಎಂದರು.
ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟು ಪಡೆದ 160 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಚಿವ ಎಂಟಿಬಿ ನಾಗರಾಜ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಧ್ಯಪ್ರದೇಶದ ಇಂದೋರ್ ಹೋಳ್ಕರ್ ಮಹಾಸಂಸ್ಥಾನದ ಯುವರಾಜ ಯಶವಂತ ರಾವ್ ಹೋಳ್ಕರ್, ಮಾಜಿ ಶಾಸಕ ಡಾ.ಹುಲಿನಾಯ್ಕ, ಟ್ರಸ್ಟ್ ಸಂಸ್ಥಾಪಕ ಟ್ರಸ್ಟಿ ಡಾ.ವಿಜಯಲಕ್ಷ್ಮೀ ಪರಮೇಶ್ ಇತರರು ಇದ್ದರು.