ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳಾದವರು ಕಲಿಸಿದ ಗುರುಗಳನ್ನು ಸ್ಮರಿಸುತ್ತ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಅಲ್ಲದೆ ದುಶ್ಚಟಗಳಿಗೆ ಬಲಿಯಾಗದೆ ಸನ್ಮಾರ್ಗದಲ್ಲಿ ಸಾಗಿ ಸಂತೃಪ್ತ ಜೀವನ ನಡೆಸಬೇಕು ಎಂದು ಪಾಲಿಕೆ ಸದಸ್ಯ ವಿಷ್ಣುತೀರ್ಥ ಕೊರ್ಲಹಳ್ಳಿ ಹೇಳಿದರು.
ನಗರದ ನಿಡವಣಿ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪಿಯು ವಿದ್ಯಾರ್ಥಿಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಅತಿಥಿಯಾಗಿ ಆಗಮಿಸಿದ್ದ ಡಾ. ಗೀತಾ ಉತ್ತೂರ ಮಾತನಾಡಿ, ಯಶಸ್ಸು ಎಂಬುದು ತಕ್ಷಣಕ್ಕೆ ಸಿಗುವಂತಹದ್ದಲ್ಲ. ಸತತ ಕಠಿಣ ಪರಿಶ್ರಮ ಪ್ರಯತ್ನದ ಫಲವೇ ಯಶಸ್ಸು. ಮೊಬೈಲ್ ಗೀಳು ಹಚ್ಚಿಕೊಳ್ಳದೆ ಜ್ಞಾನಗಳಿಸಿ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷೆ ಪ್ರಭಾ ನಿಡವಣಿ ಮಾತನಾಡಿ, ದೇಶದ ಆರ್ಥಿಕ ಅಭಿವೃದ್ಧಿಗೆ ಧನವಷ್ಟೇ ಮುಖ್ಯವಲ್ಲ. ಉತ್ಕೃಷ್ಟ, ಸೃಜನಶೀಲತೆ ,ಕೌಶಲಗಳೇ ಮುಖ್ಯ. ಅಲ್ಲದೆ ಎಲ್ಲ ರೀತಿಯಲ್ಲೂ ದೇಶವು ಮೌಲ್ಯಯುತವಾಗಿ ಬೆಳೆಯಲು ಮಾನವೀಯ ಮೌಲ್ಯಗಳು ಬಹುಮುಖ್ಯ ಎಂದರು.
ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಮತ್ತು ಸಾಂಸ್ಕೃತಿ ಕಾರ್ಯಕ್ರಮದ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಪಡೆದ ಪಿಯು ಪ್ರಥಮ ವರ್ಷದ ವಿದ್ಯಾರ್ಥಿಯಾದ ಕಾಂತೇಶ ಹಿರೇಮಠ, ಸಾಧಕ ವಿದ್ಯಾರ್ಥಿಗಳು ಹಾಗೂ ವಾರ್ಷಿಕ ಕ್ರೀಡಾಕೂಟದ ವಿಜೇತ ಕ್ರೀಡಾಪಟುಗಳಿಗೆ ಸನ್ಮಾನಿಸಲಾಯಿತು.
ಪ್ರೊ. ಮಂಜುಳಾ ಚಕಡಿ, ಪ್ರೊ. ಮೌನೇಶ ಬಡಿಗೇರ, ಪ್ರೊ. ಲಕ್ಷ್ಮೀ ಆರ್., ಸಂಜೀವ ಯಲಿಗಾರ, ಪ್ರೊ. ಇಂದಿರಾ, ಮಂಜುನಾಥ ಹಿರೇಮಠ, ಉಪನ್ಯಾಸಕ, ಉಪನ್ಯಾಸಕೇತರ ಸಿಬ್ಬಂದಿ, ಇತರರು ಇದ್ದರು.
ಪ್ರೊ. ಅವಿನಾಶ ಸೆರೆಮನಿ ಸ್ವಾಗತಿಸಿದರು. ಪ್ರಭಾರಿ ಪ್ರಾಚಾರ್ಯ ರಮ್ಯಾ ಹೆಗಡೆ ವಾರ್ಷಿಕ ವರದಿ ವಾಚಿಸಿದರು. ಪ್ರೊ. ಕಲ್ಪನಾ ಮತ್ತು ಪ್ರೊ. ಪೂಜಾ ನಿರೂಪಿಸಿದರು. ಪ್ರೊ. ಸಿದ್ದಾರ್ಥ ವಂದಿಸಿದರು.