ಸೇಡಂನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಅಪ್ಪಾರಾವ ಸೌದಿ, ಅರುಣಕುಮಾರ ಕದಂ ಅವರಿಗೆ ಕಲ್ಯಾಣ ಕರ್ನಾಟಕ ಪತ್ರಕರ್ತ ಹಾಗೂ ಬಸವರಾಜ ಡಿಗ್ಗಾವಿ ಅವರಿಗೆ ಶಿವ ಸಂಪದ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಶ್ರೀ ರೇವಣಸಿದ್ದ ಶಿವಾಚಾರ್ಯರು, ಡಾ.ಸುಜಾತಾ ಜಂಗಮಶೆಟ್ಟಿ, ಶಿವಯ್ಯಸ್ವಾಮಿ ಬಿಬ್ಬಳ್ಳಿ ಇತರರಿದ್ದರು. 
ಜಿಲ್ಲೆ

ನಿಸ್ವಾರ್ಥ ಸೇವಕರಿಗೆ ಪುರಸ್ಕಾರ ಲಭಿಸಲಿ

ಸೇಡಂ: ನಾಡಿನಾದ್ಯಂತ ಹಲವು ಸಂಸ್ಥೆಗಳು ಪುರಸ್ಕಾರ ನೀಡುತ್ತಿವೆ, ಆದರೆ ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನದವರ ಮಾದರಿಯಲ್ಲಿ ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವವರನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸ ಆಗಬೇಕಾಗಿದೆ ಎಂದು ಕಲಬುರಗಿ ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಹೇಳಿದರು.

ಕೊತ್ತಲ ಬಸವೇಶ್ವರ ದೇವಾಲಯದ ನಾಗೇಂದ್ರಪ್ಪ ಪಾಟೀಲ್ ಅರೆಬೊಮ್ಮನಳ್ಳಿ ಕಲ್ಯಾಣ ಮಂಟಪದಲ್ಲಿ ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನದಿಂದ ಬುಧವಾರ ಆಯೋಜಿಸಿದ್ದ `ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿ' ಪ್ರಧಾನ ಸಮಾರಂಭದಲ್ಲಿ ಸಾಧಕರಿಗೆ ಪುರಸ್ಕಾರ ನೀಡಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ಅನೇಕ ಪ್ರತಿಭೆಗಳು ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ಅವರನ್ನು ಯಾರೊಬ್ಬರೂ ಗುರುತಿಸಲ್ಲ. ಹೀಗಾಗಿ ನಮ್ಮ ಪ್ರತಿಭೆಗಳನ್ನು ನಾವೇ ಮುನ್ನೆಲೆಗೆ ತರುವ ಕೆಲಸ ಮಾಡಬೇಕಾಗಿದೆ ಎಂದರು.

ಶಿವಸಂಪದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಸವರಾಜ ಡಿಗ್ಗಾವಿ, ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಸಂತಸ ತಂದಿದೆ. ಪ್ರತಿಷ್ಠಾನ ಮತ್ತು ಇಲ್ಲಿನ ಸಾಹಿತ್ಯ ಬಳಗ ಬಡ ವಿದ್ಯಾರ್ಥಿಗಳಿಗೆ ಗುರುತಿಸಿದ್ದಲ್ಲಿ ಅಂತಹವರಿಗೆ ಉಚಿತವಾಗಿ ಎರಡು ವರ್ಷ ಪಿಯುಸಿ ಶಿಕ್ಷಣ ನಾವು ಕೊಡುತ್ತೇವೆ ಎಂದು ಘೋಷಿಸಿದರು.

ಶ್ರೀನಿವಾಸ ಸರಡಗಿಯ ಶ್ರೀ ಚಿಕ್ಕವೀರೇಶ್ವರ ಮಠದ ಶ್ರೀ ರೇವಣಸಿದ್ದ ಶಿವಾಚಾರ್ಯರು, ಪ್ರತಿಷ್ಠಾನದ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ ಮಾತನಾಡಿದರು.

ಕಲಬುರಗಿ ರಂಗಾಯಣ ನಿಕಟಪೂರ್ವ ನಿರ್ದೇಶಕ ಪ್ರಭಾಕರ ಜೋಶಿ, ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಅವಂಟಿ, ತಾಲೂಕು ಅಧ್ಯಕ್ಷ ಶರಣು ಮಹಾಗಾಂವ್, ಪ್ರಮುಖರಾದ ಅನಂತಯ್ಯ ಮುಸ್ತಾಜರ್, ಬಸವರಾಜ ಮಾಮನಿ, ಶಂಭುಲಿಂಗ ನಾಟೀಕರ್, ಸಿದ್ದಯ್ಯಸ್ವಾಮಿ ಆಡಕಿ, ರುಕ್ಮಿಣಿ ಕಾಳಗಿ, ಜನಾರ್ಧನರೆಡ್ಡಿ ತುಳೇರ, ಈರಣ್ಣಗೌಡ ರೆಮ್ಮಣ್ಣಿ, ಸುಧೀರ ಬಿರಾದಾರ, ಶರಣಯ್ಯಸ್ವಾಮಿ ಬೊಮ್ನಳ್ಳಿ, ಮಲ್ಲಮ್ಮ ಪತ್ರಿ, ವಿಘ್ನೇಶ್ವರಸ್ವಾಮಿ ಬೊಮ್ನಳ್ಳಿ, ಸಿದ್ದಲಿಂಗಯ್ಯಸ್ವಾಮಿ ಮಲಕೂಡ, ಅವಿನಾಶ ಬೊರಂಚಿ ಇತರರಿದ್ದರು.

ಶರಣು ಕೆರಳ್ಳಿ ಪ್ರಾರ್ಥಿಸಿದರು. ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನದ ಕೋಶಾಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಸ್ವಾಗತಿಸಿದರು. ಪ್ರಧಾನ ಕರ‍್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ ಪ್ರಾಸ್ತವಿಕ ಮಾತನಾಡಿದರು. ಸದಸ್ಯ ಡಾ.ಜಗನ್ನಾಥ ತರನಳ್ಳಿ ನಿರೂಪಣೆ ಮಾಡಿದರು. ಸಂಸ್ಥಾಪಕ ನಾಗಯ್ಯಸ್ವಾಮಿ ಬೊಮ್ನಳ್ಳಿ ವಂದಿಸಿದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ: ಪತ್ರಕರ್ತ ಲಿಂ.ವೀರಭದ್ರ ಮಾಮನಿ ಸ್ಮರಣಾರ್ಥ ನೀಡಲಾಗುವ ೧೬ನೇ ವರ್ಷದ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿಯನ್ನು ಪತ್ರಕರ್ತರಾದ ಅಪ್ಪಾರಾವ ಸೌದಿ ಹಾಗೂ ಅರುಣ ಕದಂ ಅವರಿಗೆ ಹಾಗೂ ಶಿವಯ್ಯಸ್ವಾಮಿ ಮಠಪತಿ ಸ್ಮರಣಾರ್ಥ ಕೊಡಮಾಡುವ ಶಿವ ಸಂಪದ ಪುರಸ್ಕಾರವನ್ನು ಶ್ರೀಗುರು ವಿದ್ಯಾಪೀಠ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಬಸವರಾಜ ಡಿಗ್ಗಾವಿ ಅವರಿಗೆ ಪ್ರದಾನ ಮಾಡಲಾಯಿತು.

ಕಲಬುರಗಿ ಜಿಲ್ಲೆಯಲ್ಲಿಯೇ ಸೇಡಂನಲ್ಲಿ ಅತೀ ಹೆಚ್ಚು ಸಾಹಿತ್ಯ, ಸಂಗೀತ, ರಂಗಭೂಮಿ ಚಟುವಟಿಕೆ ನಡೆಯುತ್ತವೆ. ಅನುಪಮ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರು ಹಾಗೂ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನ ಪ್ರಶಸ್ತಿ ನೀಡುವ ಮೂಲಕ ಗೌರವಿಸುತ್ತಿರುವುದು ಖುಷಿಯ ಸಂಗತಿ.

| ಡಾ.ಸುಜಾತಾ ಜಂಗಮಶೆಟ್ಟಿ, ನಿರ್ದೇಶಕಿ, ಕಲಬುರಗಿ ರಂಗಾಯಣ